ನವದೆಹಲಿ, ಜು 28 (Daijiworld News/MSP): ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಸಾಧ್ಯತೆಗಳ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ ಪ್ರಧಾನಿ ನರೇಂದ್ರ ಮೋದಿ, ಅಧಿಕೃತವಾಗಿ ರಾಮಮಂದಿರದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಾಂವಿಧಾನಿಕ ಉಲ್ಲಂಘನೆಯಾಗಿದೆ.
ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ. 400 ವರ್ಷಗಳಿಂದ ಬಾಬ್ರಿ ಮಸೀದಿಯೂ ಅಯೋಧ್ಯೆಯಲ್ಲಿ ಇದ್ದದ್ದನ್ನು ನಾವು ಮರೆಯಲು ಸಾಧ್ಯವಿಲ್ಲ. ಆದರೆ ಅದನ್ನು ದುಷ್ಕರ್ಮಿಗಳು 1992 ರಲ್ಲಿ ಕೆಡವಿದರು ಎಂದು" ಅಸದುದ್ದೀನ್ ಒವೈಸಿ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು ಪುರಾತನ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿ 1992 ರ ಡಿಸೆಂಬರ್ನಲ್ಲಿ "ಕರ ಸೇವಕರು" ನೆಲಸಮ ಮಾಡಿದ್ದರು. ಈ ವಿವಾದಿತ ಸ್ಥಳದ ಕುರಿತು, ರಾಮಂದಿರ ನಿರ್ಮಾಣದ ಪರವಾಗಿ ಕಳೆದ ವರ್ಷ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಆಗಸ್ಟ್ 5 ರಂದು ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಆಯೋಜಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ಬುಧವಾರ ತಿಳಿಸಿದ್ದರು. ಆದರೆ ಅಯೋಧ್ಯೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಜರಾಗುವ ನಿರ್ಧಾರದ ಬಗ್ಗೆ ಇನ್ನು ಅಧಿಕೃತವಾಗಿ ನಿರ್ಧಾರವಾಗಿಲ್ಲ.