ಬೆಂಗಳೂರು, ಜು. 28 (DaijiworldNews/MB) : ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ ಹೊರಡಿಸಿರುವ ಸುಗ್ರೀವಾಜ್ಞೆ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಟಿ ಕರೆದು ಮಾತನಾಡಿದ ಅವರು, ಸರ್ಕಾರ ರೈತ ವಿರೋಧಿ ಕ್ರಮಗಳನ್ನು ಕೈಗೊಂಡಿದ್ದು ಕರ್ನಾಟಕ ಭೂಸುಧಾರಣೆ ಕಾಯ್ದೆ 1961 ಸೆಕ್ಷನ್ 79 ಎ, 79 ಬಿ, 79 ಸಿ ರದ್ದು ಮಾಡಿರುವುದು ರೈತ ವಿರೋಧಿ ಕ್ರಮವಾಗಿದೆ. ಇದರಿಂದಾಗಿ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲಕರ ಸ್ಥಿತಿ ಸೃಷ್ಟಿಯಾಗುತ್ತದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಎಲ್ಲಾ ಕಡೆಗಳಲ್ಲೂ ರಿಯಲ್ ಎಸ್ಟೇಟ್ ಮಾಫಿಯಾ ಹೆಚ್ಚಾಗುತ್ತದೆ. ಇದರಿಂದಾಗಿ ರೈತರು ಕಂಗಾಲಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರನ್ನು ಸಂಕಷ್ಟಕ್ಕೆ ದೂಡಿ ಉದ್ಯಮಿಗಳನ್ನು ಮೇಲಕ್ಕೇರಿಸುವ ಈ ತಿದ್ದುಪಡಿ ಮಾಡಬಾರದು ಎಂದು ಸರ್ಕಾರಕ್ಕೆ ನಾನು ಮೂರು ಬಾರಿ ಪತ್ರ ಬರೆದಿದ್ದೇನೆ. ಕೊರೊನಾ ಸಂದರ್ಭ ಸರ್ಕಾರದ ನಿಯಮ ಉಲ್ಲಂಘನೆ ಮಾಡಬಾರದು ಎಂಬ ಕಾರಣಕ್ಕೆ ನನಗೆ ಮಾತನಾಡಲು ಆಗಿಲ್ಲ. ಆದರೆ ಈಗಲೂ ನಾನು ಸುಮ್ಮನೆ ಕೂತರೆ ಆಗದು, ರೈತರಿಗೆ ಜನರಿಗೆ ಇದರಿಂದಾಗಿ ತೊಂದರೆ ಉಂಟಾಗುತ್ತದೆ. ಯಾರೋ ಒಬ್ಬ ಉದ್ಯಮಿ ಕೈಗಾರಿಕೆಗಾಗಿ ರೈತನ ಭೂಮಿ ಖರೀದಿಸುತ್ತಾನೆ. ಏಳು ವರ್ಷದ ಬಳಿಕ ಪರಭಾರೆ ಮಾಡುತ್ತಾನೆ. ಇದರಿಂದಾಗಿ ರೈತನಿಗೆ ಆಗುವ ಪ್ರಯೋಜನವಾದರು ಏನು ಎಂದು ಪ್ರಶ್ನಿಸಿದ್ದಾರೆ.
ಇದು ಅತ್ಯಂತ ಕೆಟ್ಟದಾದ ತಿದ್ದುಪಡಿಯಾಗಿದೆ. ಬಹುಮತ ಇದೆ ಎಂದು ಸಿಕ್ಕಸಿಕ್ಕ ಕಾಯ್ದೆ ಜಾರಿ ಮಾಡುವುದು ಸರಿಯಲ್ಲ ಎಂದು ಸಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ₹2,000 ಕೋಟಿಯಷ್ಟು ಹಗರಣವಾಗಿದೆ ಎಂದು ಆರೋಪಿಸಿದೆ. ಭ್ರಷ್ಟಾಚಾರ ಮಾಡಿದವರೆ ಮತ್ತಷ್ಟು ಬಲಿಷ್ಟರಾಗುವುದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಹಾಗೆಂದು ನಾನು ಸುಮ್ಮನೆ ಕೂರಲಾಗದು. ಜನಸಾಮಾನ್ಯರ ವಿಷಯದಲ್ಲಿ ಯಾವುದೇ ಆಟವಾಡಿದರೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.