ಛತ್ತೀಸ್ಗಢ, ಜು. 28 (DaijiworldNews/MB) : ಕೊರೊನಾ ಕಾರಣದಿಂದ ಶಾಲೆಗಳನ್ನು ಮುಚ್ಚಲಾಗಿದ್ದು ಹಲವರು ಆನ್ಲೈನ್ ಶಿಕ್ಷಣಕ್ಕೆ ಮೊರೆಹೋಗಿದ್ದಾರೆ. ಆದರೆ ಇದಕ್ಕೆ ಬೇಕಾದ ಸೌಲಭ್ಯಗಳು ಇಲ್ಲದೆ ಅನೇಕ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಹಳ್ಳಿಯೊಂದರಲ್ಲಿ ವಿಭಿನ್ನವಾದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಮಕ್ಕಳಿಗೆ ಧ್ವನಿವರ್ಧಕದ ಮೂಲಕ ಭೋಧಿಸಲಾಗುವ ಪಾಠದಿಂದ ಶಿಕ್ಷಣ ಪಡೆಯುತ್ತಾರೆ.
ಹೌದು, ಛತ್ತೀಸ್ಗಢದ ಭಟ್ಪಾಲ್ ಗ್ರಾಮದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಆರು ಧ್ವನಿವರ್ಧಕಗಳನ್ನು ಹಾಕಲಾಗಿದ್ದು ದಿನಕ್ಕೆ 2 ಬಾರಿ 90 ನಿಮಿಷಗಳ ಕಾಲ ನಡೆಸಲಾಗುವ ತರಗತಿಯನ್ನು ಧ್ವನಿವರ್ದಕದ ಮೂಲಕವೇ ನಡೆಸಲಾಗುತ್ತದೆ.
ನೆರೆಹೊರೆಯಲ್ಲಿರುವ ಮಕ್ಕಳು ನಿಗದಿ ಮಾಡಿದ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಬಂದು ಕುಳಿತು ಈ ಧ್ವನಿವರ್ಧಕದ ಮೂಲಕ ಭೋಧಿಸಲಾಗುವ ಶಿಕ್ಷಣವನ್ನು ಪಡೆಯುತ್ತಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಖನಿಜ ನಿಧಿ ಅಭಿವೃದ್ಧಿ ಮಂಡಳಿಯ ನಿಖಿಲೇಶ್ ಹರಿ ಎಂಬವರು, ಗ್ರಾಮದಲ್ಲಿ 300 ಕುಟುಂಬಗಳಿದ್ದು ಮಕ್ಕಳ ಶಿಕ್ಷಣಕ್ಕಾಗಿ ಆರು ಧ್ವನಿವರ್ಧಕಗಳನ್ನು ಹಾಕಿದ್ದೇವೆ. ಧ್ವನಿವರ್ಧಕವನ್ನು ಇಂಗ್ಲೀಷ್ ಕಲಿಸಲು ಬಳಸಲಾಗುತ್ತದೆ, ಮತ್ತು ಅಪೌಷ್ಟಿಕತೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು ಬಳಸಲಾಗುತ್ತದೆ. ನಾವು ಜೂನ್ 14 ರಿಂದ ದಿನಕ್ಕೆ ಎರಡು ಬಾರಿ ಇದನ್ನು ನಡೆಸುತ್ತಿದ್ಧೇವೆ ಎಂದು ಹೇಳಿದ್ದಾರೆ.
ಶಿಕ್ಷಕರಲ್ಲಿ ಒಬ್ಬರಾದ ಶೈಲೇಂದ್ರ ತಿವಾರಿ ಅವರು, ಶಾಲೆಯಲ್ಲಿ ತರಗತಿ ನಡೆಸುವ ಬದಲು, ನಾವು ಈ ರೀತಿ ಶಿಕ್ಷಣ ನೀಡುತ್ತಿದ್ದೇವೆ. ಧ್ವನಿವರ್ಧಕಗಳನ್ನು ಹಳ್ಳಿಯ ಪ್ರತಿಯೊಂದು ಭಾಗದಿಂದಲೂ ಕೇಳುವ ರೀತಿಯಲ್ಲಿ ಇರಿಸಲಾಗಿದೆ. ಆದ್ದರಿಂದ ಮಕ್ಕಳು ಮನೆಯಲ್ಲಿ ಕುಳಿತು ಪಾಠವನ್ನು ಕೇಳಬಹುದಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಪೋಷಕರ ಬಳಿ ಸ್ಮಾರ್ಟ್ ಫೋನ್ಗಳನ್ನು ಹೊಂದಿದ್ದಾರೆ ಎಂದು ನಾವು ನಿರೀಕ್ಷಿಸಲಾಗುವುದಿಲ್ಲ. ಮಕ್ಕಳಿಗೆ ಶಿಕ್ಷಣ ನೀಡಲು ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಪ್ರಸ್ತುತ, ಜಿಲ್ಲೆಯ ಏಳು ಬ್ಲಾಕ್ಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಜತ್ ಬನ್ಸಾಲ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸ್ಥಳಿಯ ನಿವಾಸಿ ಸುರೇಶ್ ಭಗತ್, ಇದರಿಂದಾಗಿ ಕಲಿಯುವುದು ಮಕ್ಕಳು ಮಾತ್ರವಲ್ಲ. ನಾವು ಕೂಡಾ ಇಂಗ್ಲೀಷ್ನಲ್ಲಿ ಪ್ರಾಣಿ, ಪಕ್ಷಿಗಳಿಗೆ ಏನು ಕರೆಯುತ್ತಾರೆ ಎಂಬುದನ್ನು ಈ ಮೂಲಕ ಕಲಿಯುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.