ಬೆಂಗಳೂರು, ಜು 28 (Daijiworld News/MSP): ಕೊರೊನಾಸಾಂಕ್ರಾಮಿಕ ಪ್ರಸರಣದ ಈ ಕಾಲಘಟ್ಟದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಹೇಳಿದ್ದಾರೆ.
ಕೊರೊನಾ ಸಾಮಾಜಿಕ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ಈ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲವಾದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ಆಯಾಮಗಳಿಂದಲೂ ಪ್ರಯತ್ನ ಮಾಡಲಾಗುತ್ತದೆ ಎಂದರು.
ವಿವಿಧ ಸರ್ಕಾರೇತರ 36ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ ವೆಬಿನಾರ್ನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಮಕ್ಕಳ ಕಲಿಕೆಯ ನಿರಂತರತೆಗೆ ಮಾಡಬಹುದಾದ ಮತ್ತು ತಮ್ಮ ತಮ್ಮ ವ್ಯಾಪ್ತಿಯಲಿ ್ಲತಾವು ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಆಲಿಸಿದ ಸಚಿವರು ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದೆರಗಿರುವುದರಿಂದ ಆ ನಿಟ್ಟಿನಲ್ಲಿ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.
ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಶಿಕ್ಷಣ ಇಲಾಖೆ ಎಲ್ಲ ಉಪಕ್ರಮಗಳತ್ತಲೂ ಮಕ್ಕಳ ಹಿತದೃಷ್ಟಿಯಿಂದ ಯೋಚಿಸುತ್ತಿದೆ ಎಂದು ಅವರು ಹೇಳಿದರು.