ರಾಜಸ್ಥಾನ, ಜು 29 (Daijiworld News/MSP): ದೇಶದಲ್ಲಿ ಒಂದೆಡೆ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ ಕೊರೊನಾ ಗಣನೀಯವಾಗಿ ಏರುತ್ತಲೇ ಇದೆ. ಇನ್ನೊಂದೆಡೆ ಕೊರೊನಾದ ಬಗ್ಗೆ ದೇಶದ ನಾಯಕರು ಚಿತ್ರ - ವಿಚಿತ್ರವಾದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದೀಗ ಈ ಸಾಲಿಗೆ ಸೇರಿದವರಲ್ಲಿ ರಾಜಸ್ಥಾನದ ದೌಸಾ ಲೋಕಸಭಾ ಬಿಜೆಪಿ ಸಂಸದೆ ಜಸ್ ಕೌರ್ ಮೀನಾ ಕೂಡಾ ಒಬ್ಬರು.
"ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾದ ಕೂಡಲೇ ಕೊರೊನಾ ದೇಶದಿಂದ ಕೊರೊನಾ ಓಡಿಹೋಗುತ್ತದೆ" ಎಂದು ಸಂಸದೆ ಜಸ್ ಕೌರ್ ಮೀನಾ ಎಂದು ಹೇಳಿದ್ದಾರೆ. ಈ ಹಿಂದೆ ಇದೇ ರೀತಿಯ ಹೇಳಿಕೆಯನ್ನು ಮಧ್ಯಪ್ರದೇಶದ ಸ್ಪೀಕರ್ ರಾಮೇಶ್ವರ ಶರ್ಮಾ ಅವರು ನೀಡಿದ್ದರು.
" ನಾವು ಆಧ್ಯಾತ್ಮಿಕ ಶಕ್ತಿಯ ಅನುಯಾಯಿಗಳು. ಆಧ್ಯಾತ್ಮಿಕ ಶಕ್ತಿಯ ಪ್ರಕಾರವೇ ಹೋಗೋಣ. ದೇವಾಲಯವನ್ನು ನಿರ್ಮಿಸಿದ ಕೂಡಲೇ ಕೊರೊನಾ ದೇಶದಿಂದ ಪಲಾಯನ ಮಾಡುತ್ತದೆ. ಆಗಸ್ಟ್ 5 ರಂದು ಶ್ರೀ ರಾಮ ಮಂದಿರ ನಿರ್ಮಾಣದ ವರ್ಷಗಳ ಕಾಯುವಿಕೆಯ ಕನಸು ಕೊನೆಗೊಳ್ಳಲಿದೆ, ಅಂದು ನಾವೆಲ್ಲರೂ ಸಂತೋಷದಿಂದ ದೀಪವನ್ನು ಬೆಳಗಿಸಿ ಮನೆಗಳಲ್ಲಿ ಸಿಹಿತಿಂಡಿಗಳನ್ನು ತಯಾರಿಸಿ ವಿತರಿಸುತ್ತೇವೆ " ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5 ರಂದು ಭೂಮಿ ಪೂಜೆಯೊಂದಿಗೆ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು 200 ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.