ನವದೆಹಲಿ, ಜು 29 (DaijiworldNews/PY): ಪಾಕಿಸ್ತಾನದ ಉಗ್ರರು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದಾಳಿ ಮಾಡುವ ಸಂಚು ರೂಪಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ.
ಉಗ್ರರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಕೂಡಾ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿಯ ಸಂಚನ್ನು ರೂಪಿಸುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ.
ಅಫ್ಗಾನಿಸ್ತಾನದ ಲಷ್ಕರ್-ಎ-ತಯಬಾ ಹಾಗೂ ಜೈಷ್-ಎ-ಮೊಹಮ್ಮದ್ ಸಂಘಟನೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ಸರ್ವಿಸ್ ಇಂಟಲಿಜೆನ್ಸ್ ಸಹಾಯದೊಂದಿಗೆ ಭಾರತದಲ್ಲಿರುವ ಧಾರ್ಮಿಕ ಸ್ಥಳಗಳಿಗೆ ದಾಳಿ ನಡೆಸಲು ಸಂಚು ನಡೆಸಿವೆ. ಧಾರ್ಮಿಕ ಸ್ಥಳಗಳಿಗೆ ದಾಳಿ ನಡೆಸಲು ಈ ಸಂಘಟನೆಗಳು 3-5 ಗುಂಪುಗಳಾಗಿ ವಿಂಗಡಿಸಿ ಉಗ್ರರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಅತಿ ಗಣ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉದ್ದೇಶವನ್ನು ಈ ಸಂಘಟನೆಗಳು ಮಾಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಪಾಕಿಸ್ತಾನದಲ್ಲಿ 20 ಮಂದಿ ತಾಲಿಬಾನ್ ಉಗ್ರರಿಗೆ ತರಬೇತಿ ನೀಡಲಾಗುತ್ತಿದ್ದು, ಇದು ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸುವ ಸಲುವಾಗಿ ನೀಡುತ್ತಿರುವ ತರಬೇತಿಯಾಗಿದೆ. ಅಲ್ಲದೇ, ಪಾಕಿಸ್ತಾನದ ಸೈನ್ಯದ ವಿಶೇಷ ಸೇನಾ ಪಡೆಯು ಜಲಾಲಾಬಾದ್ನಲ್ಲಿ ದಾಳಿ ನಡೆಸುವ ನಿಟ್ಟಿನಲ್ಲಿ ಈ ತರಬೇತಿ ನೀಡುತ್ತಿದ್ದು, ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಅಕ್ರಮವಾಗಿ ನುಸುಳಿ ಕಣಿವೆಯಲ್ಲಿ ಕೃತ್ಯ ನಡೆಸಲು ಇಂತಹ ತರಬೇತಿ ನೀಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಇಲಾಖೆ ನೀಡಿದೆ.
ದಾಳಿ ನಡೆಸುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿದೆ ಹಿನ್ನೆಲೆ, ದೆಹಲಿ ಸೇರಿದಂತೆ ಅಯೋಧ್ಯೆ ಹಾಗೂ ಕಾಶ್ಮೀರದ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಮುಂಜಾಗ್ರತೆ ವಹಿಸುವಂತೆ ಇಲಾಖೆ ಸೂಚನೆ ನೀಡಿದೆ.