ಬೆಂಗಳೂರು, ಜು 29 (Daijiworld News/MSP): ರಾಜ್ಯ ಸರ್ಕಾರ ಚಿಕಿತ್ಸೆಗೆ ದರ ನಿಗದಿಪಡಿಸಿದ್ರೂ ರಾಜ್ಯದಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಯ ಚಿಕಿತ್ಸೆಗೆ ಲಕ್ಷ ಲಕ್ಷ ಬಿಲ್ ದೋಚುತ್ತಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿದೆ. ಈ ನಡುವೆ ದುಪ್ಪಟ್ಟು ಚಿಕಿತ್ಸಾ ದರ ವಿಧಿಸದಂತೆ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ವಾರ್ನಿಂಗ್ ನೀಡಿದ್ದರೂ ಇದ್ಯಾವುದಕ್ಕೂ ಕೆಲ ಖಾಸಗಿ ಆಸ್ಪತ್ರೆಗೆ ಸೊಪ್ಪು ಹಾಕುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಟ್ವೀಟ್ ನಿಂದಲೇ ಬಹಿರಂಗವಾಗಿದೆ.
ಕೊರೊನಾ ಪೀಡಿತ ರೋಗಿಗೆ 5 ಲಕ್ಷ ಬಿಲ್ ಮಾಡಿ ಸಚಿವರಿಗೆರಿಗೆ ಶಾಕ್ ನೀಡಿರುವ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ ವಿರುದ್ದ ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕಿಡಿಕಾರಿದ್ದು, ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಕೋರಿ ಸರಣಿ ಸಭೆಗಳನ್ನು ನಡೆಸಲಾಗಿದ್ದು, ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ಸೂಚಿಸಲಾಗಿತ್ತು. ಜೊತೆಗೆ ವಿವಿಧ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಲಾಗಿತ್ತು. ಸಭೆಯಲ್ಲಿ ಈ ಎಲ್ಲ ಸೂಚನೆಗಳಿಗೆ ಸಮ್ಮತಿಸಿದ್ದ ಕೆಲ ಖಾಸಗಿ ಆಸ್ಪತ್ರೆಗಳು ಬಳಿಕ ಯಾವುದನ್ನೂ ಪಾಲಿಸದೆ ಎಲ್ಲವನ್ನೂ ಗಾಳಿಗೆ ತೂರಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿವೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಇಂದು ಆ ಖಾಸಗಿ ಆಸ್ಪತ್ರೆಯ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ . ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದೇನೆ . ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು ಎಂದು ಟ್ವೀಟ್ ಮಾಡಿದ್ದಾರೆ.