ಬೆಂಗಳೂರು, ಜು 29 (Daijiworld News/MSP): ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು. ಬಿ ರೂಪೇಶ್ ಅವರ ವರ್ಗಾವಣೆ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಇದೇ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡ್ತೀರಿ ಶಹಬ್ಬಾಸ್, ಯಡಿಯೂರಪ್ಪ ಅವರೇ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು" ಶಹಬ್ಬಾಸ್, ಯಡಿಯೂರಪ್ಪ ಅವರೇ, ಒಂದೆಡೆ ಕೊರೊನಾ ವಾರಿಯರ್ಸ್ಗೆ ಆಕಾಶದಿಂದ ಹೂಮಳೆ ಸುರಿಸುತ್ತೀರಿ, ಇನ್ನೊಂದೆಡೆ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡ್ತೀರಿ. ಇದೇನಾ ಕೊರೊನಾ ವಾರಿಯರ್ಸ್ಗೆ ಕೊಡುವ ಗೌರವ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ " ಕೊರೊನಾ ಅಕ್ರಮ ಬಯಲಿಗೆಳೆದರೆ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡ್ತೀರಿ ಎಂದು ದೂರುತ್ತೀರಿ,ಮೊದಲು, ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ ಆಯುಕ್ತರ ವರ್ಗಾವಣೆ ಮಾಡಿದ್ದೀರಿ, ಈಗ ಕೋಮುವಾದಿ ಪುಂಡರ ರಕ್ಷಿಸಲು ದ.ಕ.ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದ್ದೀರಿ. ಇದೇನಾ ನಿಮ್ಮ ಕೊರೊನಾ ವಿರುದ್ಧದ ಹೋರಾಟ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.