ನವದೆಹಲಿ, ಜು 29 (DaijiworldNews/PY): ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿರುವ ಬೆನ್ನಲ್ಲೇ ಸುಶಾಂತ್ ಅವರ ಫ್ಯಾಮಿಲಿ ಲಾಯರ್ ರಿಯಾಳ ವಿರುದ್ದ ಆರೋಪ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಅವರ ಫ್ಯಾಮಿಲಿ ಲಾಯರ್ ರಿಯಾ ಚಕ್ರವರ್ತಿ ವಿರುದ್ಧ ಆರೋಪಗಳ ಬಗ್ಗೆ ತಿಳಿಸಿರುವ ಅವರು, ಸುಶಾಂತ್ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಮುಂಬೈ ಪೊಲೀಸರು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸುಶಾಂತ್ ಅವರ ಸ್ನೇಹಿತರ ಮೇಲೆ ಗಮನಹರಿಸುವಂತೆ ನಾಲ್ಕು ತಿಂಗಳ ಹಿಂದೆ ಬಾಂದ್ರಾ ಪೊಲೀಸರಿಗೆ ನಾನು ಮನವಿ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆಯಲ್ಲಿ ರಿಯಾ ಪಾತ್ರವಿದೆ. ಆತನ ಮಾನಸಿಕ ಸ್ಥಿತಿ ಹದಗೆಡಲು ಆಕೆಯೇ ಕಾರಣ. ಅಲ್ಲದೇ, ಆಕೆಯೇ ಮನಶಾಸ್ತ್ರಜ್ಞರು ಹಾಗೂ ಔಷಧಿಗಳನ್ನು ಆಯ್ಕೆ ಮಾಡುತ್ತಿದ್ದಳು. ಈ ನಡುವೇ ಸುಶಾಂತ್ ಬ್ಯಾಂಕ್ ಖಾತೆಯಿಂದ 15 ಕೋ.ರೂ ಎಗರಿಸಿದ್ದಳು ಎಂದಿದ್ದಾರೆ.
ರಿಯಾ ಸುಶಾಂತ್ ಅವರನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಳು. ಅಲ್ಲದೇ, ಸುಶಾಂತ್ನ ತಂದೆಯನ್ನು ಕೂಡಾ ಭೇಟಿ ಮಾಡಲು ಬಿಡುತ್ತಿರಲಿಲ್ಲ. ಸುಶಾಂತ್ ತಂದೆ ಹಲವಾರು ಬಾರಿ ಮಗನನ್ನು ನೋಡಲು ಪ್ರಯತ್ನಿಸಿದ್ದರು. ಆದರೆ, ಆಕೆ ಬಾಡಿಗಾರ್ಡ್ಗಳ ಮೂಲಕ ಅವರನ್ನು ತಡೆಯುತ್ತಿದ್ದಳು. ತನ್ನ ಕುಟುಂಬದಿಂದ ಆತ ದೂರ ಉಳಿಯದೇ ಇರುತ್ತಿದ್ದರೆ, ಸುಶಾಂತ್ಗೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಹಲವಾರು ದಿನಗಳ ಸಂಚು ರೂಪಿಸಿ ತಮ್ಮ ಕಾರ್ಯವನ್ನು ಸಫಲಗೊಳಿಸಿದ್ದಾರೆ. ಇದು ಕೊಲೆಯಲ್ಲ. ಬದಲಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಿಯಾ ಸುಶಾಂತ್ ಅವರನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು, ಇದುವೇ ಆತನ ಮಾನಸಿಕ ಸಮಸ್ಯೆಗೆ ಕಾರಣವಾಗಿತ್ತು. ಈ ನಡುವೆ, ಆತನಿಗೆ ನೀಡುವ ಔಷಧದ ಮೇಲೂ ರಿಯಾಳ ಪ್ರಭಾವವಿತ್ತು. ತನಿಖೆ ನಡೆದರೆ ಈ ವಿಚಾರವೆಲ್ಲ ಸ್ಪಷ್ಟವಾಗಲಿದೆ ಎಂದಿದ್ದಾರೆ.
ಇದುವರೆಗೂ ಪಾಟ್ನಾ ವೈದ್ಯರು ರಿಯಾಳನ್ನು ಬಂಧನ ಮಾಡಿಲ್ಲ. ಅವರು ಬಂಧಿಸುತ್ತಾರೆ ಎನ್ನುವ ನಂಬಿಕೆ ಇದೆ. ರಿಯಾಳೇ ಪ್ರಕರಣದ ಪ್ರಮುಖ ಕೇಂದ್ರ ಬಿಂದು. ಹಾಗಾಗಿ ಬೇರೆ ಯಾರನ್ನೂ ಬಂಧಿಸುವ ಅಗತ್ಯವಿಲ್ಲ. ಆಕೆಗೆ 10 ವರ್ಷ ಶಿಕ್ಷೆ ವಿಧಿಸಬೇಕು. ಸಂಪೂರ್ಣವಾದ ಮಾಹಿತಿಯನ್ನು ಎಫ್ಐಆರ್ನಲ್ಲಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ರಿಯಾ ಚಕ್ರವರ್ತಿ ವಿರುದ್ದ ಎಫ್ಐಆರ್ ದಾಖಲಿಸಿದ್ದು, ಕಳೆದ ಒಂದು ವರ್ಷದಲ್ಲಿ ಸುಶಾಂತ್ ಬ್ಯಾಂಕ್ ಖಾತೆಯಿಂದ ಸುಮಾರು 15 ಕೋಟಿ. ರೂ.ಗಳನ್ನು ಬೇರೆ ಖಾತೆಗೆ ವರ್ಗಾಯಿಸಲಾಗಿದೆ. ರಿಯಾ ಎಷ್ಟು ಹಣ ವಂಚಿಸಿದ್ದಾಳೆ ಎಂದು ಪೊಲೀಸರು ತನಿಖೆ ನಡೆಸಬೇಕು ಎಂದು ಹೇಳಿದ್ದರು.
ರಿಯಾ ಸುಶಾಂತ್ ಅನ್ನು ಮಾನಸಿಕ ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲದೇ, ಆಕೆ ಎಲ್ಲಾ ವೈದ್ಯಕೀಯ ವರದಿಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾಳೆ. ಸುಶಾಂತ್ ಮಾನಸಿಕ ಅಸ್ವಸ್ಥ ಎನ್ನುವ ವಿಚಾರವನ್ನು ಬಳಸಿಕೊಂಡು ಮೋಸ ಮಾಡಿದ್ದಾಳೆ ಎಂದು ಸುಶಾಂತ್ ತಂದೆ ಎಫ್ಐಆರ್ನಲ್ಲಿ ತಿಳಿಸಿದ್ದರು.
ಅಲ್ಲದೇ, ರಿಯಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸುಶಾಂತ್ ತಂದೆ ಪಾಟ್ನಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಶಾಂತ್ ಅವರ ವೈದ್ಯಕೀಯ ವರದಿಗಳು ಹಾಗೂ ಔಷಧಿಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಳು, ಆದರೆ ಈ ವಿಚಾರದಿಂದ ಮೋಸವಾಗಿದೆ. ರಿಯಾಗೆ ಸುಶಾಂತ್ನ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದಿತ್ತು. ಆದರೆ, ಸುಶಾಂತ್ನ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ದಿನಗಳ ಹಿಂದೆ ಆಕೆ ಸುಶಾಂತ್ನಿಂದ ಯಾಕೆ ದೂರವಾದಳು ಎಂದು ಸುಶಾಂತ್ನ ತಂದೆ ಪ್ರಶ್ನಿಸಿದ್ದಾರೆ. ಸುಶಾಂತ್ನ ಕ್ರೆಡಿಟ್ ಕಾರ್ಡ್ ಸೇರಿದಂತೆ ಆತನ ಆಭರಣಗಳು, ಹಣ, ಲ್ಯಾಪ್ಟಾಪ್, ವೈದ್ಯಕೀಯ ವರದಿಗಳನ್ನು ಆಕೆ ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದಾಳೆ ಎಂದು ಸುಶಾಂತ್ ತಂದೆ ಆರೋಪಿಸಿದ್ದಾರೆ.