ಹಾಸನ, ಜು. 29 (DaijiworldNews/MB) : ''ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲಷ್ಟೆ ಯೋಗ್ಯರು. ಮಾನವ ಸಮಾಜದ ಬದಲು ಝೂನಲ್ಲಿ ಇರಬೇಕಿತ್ತು'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಲೇವಡಿ ಮಾಡಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗುವುದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಿಮಗೆ ಹಕ್ಕಿದೆ. ಆದರೆ ಇಲ್ಲಸಲ್ಲದ ಆರೋಪ ಮಾಡಿ ಇಷ್ಟು ಪುರಾತನ ಇತಿಹಾಸವಿರುವ ಪಕ್ಷವಾಗಿರುವ ನೀವು ಚಿಲ್ಲರೆ ರಾಜಕೀಯ ಮಾಡಬೇಡಿ. ಆಡಳಿತದಲ್ಲಿ ಯಾವ ತಪ್ಪು ಇದ್ದರೂ ಅದನ್ನು ವಿಧಾನಸೌಧದಲ್ಲಿ ಬಂದು ಪ್ರಸ್ತಾಪಿಸಿ ಎಂದು ಹೇಳಿದ ಅವರು, ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲಷ್ಟೆ ಯೋಗ್ಯರು. ಅವರಿಗೆ ಮಾನವ ಸಮಾಜದಲ್ಲಿ ಇರುವ ಅರ್ಹತೆಯೇ ಇಲ್ಲ'' ಎಂದು ಟೀಕೆ ಮಾಡಿದರು.
''ಕಾಂಗ್ರೆಸ್ನವರು ಈ ಕೊರೊನಾ ಸಂದರ್ಭದಲ್ಲಿ ಜನರನ್ನು ಮತ್ತಷ್ಟು ಆತಂಕಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಷ್ಟು ದೀಘ್ರ ಕಾಲ ದೇಶ, ರಾಜ್ಯದಲ್ಲಿ ಆಳ್ವಿಕೆ ನಡೆಸಿರುವ ಅವರು ಈಗ ವೆಂಟಿಲೇಟರ್ ಇಲ್ಲ, ಆಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲ ಎಂದು ಹೇಳುತ್ತಾರೆ. ನಿಮ್ಮ ಕಾಲದಲ್ಲಿ ಎಷ್ಟು ವೆಂಟಿಲೇಟರ್ ಬಂದವು ಮತ್ತು ಎಲ್ಲಿ ಹೋದವು'' ಎಂದು ಪ್ರಶ್ನಿಸಿದ್ದಾರೆ.
''ನೀವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹೇಳುತ್ತೀರಿ. ಆದರೆ ನಿಜವಾಗಿ ಪ್ರಜಾಪ್ರಭುತ್ವದ ಹತ್ಯೆಗೈದವರು ಇಂದಿರಾ ಗಾಂಧಿ. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತರುವ ಮೂಲಕ ದೇಶವನ್ನು ಪೂರ್ತಿಯಾಗಿ ಜೈಲಲ್ಲಿ ಇಟ್ಟವರು ನೀವೆ ಅಲ್ಲವೇ'' ಎಂದು ಕೇಳಿದರು.
''ನೀವು ಆಡಳಿತ ಮಾಡುವಾಗ ಡೆಂಗ್ಯೂ, ಹಾವು ಕಡಿತ, ಹುಚ್ಚು ನಾಯಿ ಕಡಿತಕ್ಕೆ ಔಷಧಿಯೇ ಬಂದಿರಲಿಲ್ಲ. ಮೊದಲು ನೀವು ಇಂದಿರಾ ಕ್ಯಾಂಟೀನ್ನಲ್ಲಿ ಆಗಿರುವ ಭ್ರಷ್ಟಾಚಾರದ ಲೆಕ್ಕ ಕೊಡಿ. ನೀವು ಆಡಳಿತ ನಡೆಸುತ್ತಿದ್ದಾಗ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲವೆ'' ಎಂದು ಕಿಡಿಕಾರಿದರು.
''ನೀವೇ ಜನತಾದಳದ ಶಾಸಕರನ್ನು ತೆಗೆದುಕೊಂಡಿದ್ದು 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಹುಮತ ಪಡೆದ ಪಕ್ಷವನ್ನು ಉರುಳಿಸಿದ್ದೀರಿ. ನೀವು ಹೇಗೆ ಬೇಕಾದರೂ ಅಧಿಕಾರ ಮಾಡಬಹುದು. ನಿಮ್ಮ ಶಾಸಕರು ನಿಮ್ಮ ಆಡಳಿತ ಸರಿಯಿಲ್ಲ ಎಂದು ಬಿಜೆಪಿಗೆ ಬರುತ್ತಿರುವಾಗ ನೀವು ಬಿಜೆಪಿ ಆಡಳಿತ ಸರಿಯಿಲ್ಲ'' ಎಂದು ಹೇಳುತ್ತೀರಿ.