ಬೆಂಗಳೂರು, ಜು 30 (Daijiworld News/MSP): ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ಆದರೆ ಸಂಕಷ್ಟದ ಅವಧಿಯಲ್ಲಿ ಸೋಂಕಿತರಿಗೆ ಹೆಚ್ಚುವರಿ ದರವನ್ನು ವಿಧಿಸುವ ಮೂಲಕ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎಂಬ ಆರೋಪ ನಿರಂತರವಾಗಿ ಕೇಳಿ ಬರುತ್ತಿವೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮತ್ತೊಮ್ಮೆ ಕಿಡಿ ಕಾರಿರುವ ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದು, " ರಾಜ್ಯದ ಜನತೆಯ ಹಿತದ ಮುಂದೆ ಯಾವ ಮುಲಾಜೂ ಇಲ್ಲ. ಹಣ ಸುಲಿಗೆ ಮಾಡುವ ಆಸ್ಪತ್ರೆಗಳ ಪಟ್ಟಿ ತಯಾರಾಗಿದ್ದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವರು, "ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರ ನಿರ್ದಿಷ್ಟ ದರ ನಿಗದಿ ಮಾಡಿದೆ. ಆದರೆ ಕೆಲವು ಆಸ್ಪತ್ರೆಗಳು ಜನರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿವೆ ಎಂಬ ವರದಿಗಳು ಬರುತ್ತಿವೆ. ಈಗಾಗಲೇ ಯಾವ ಯಾವ ಆಸ್ಪತ್ರೆಗಳು ಈ ರೀತಿ ಹೆಚ್ಚು ಹಣ ಸುಲಿಗೆ ಮಾಡುತ್ತಿವೆ ಎಂಬ ಪಟ್ಟಿ ತಯಾರಿಸಲಾಗಿದೆ. ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದ ಜನತೆಯ ಹಿತದ ಮುಂದೆ ಯಾವ ಮುಲಾಜೂ ಇಲ್ಲ" ಎಂದು ಹೇಳಿದ್ದಾರೆ.