ನವದೆಹಲಿ, ಜು 30 (DaijiworldNews/PY): ಜು 29ರಂದು ಹರಿಯಾಣದ ಅಂಬಾಲಾದ ವಾಯುನೆಲೆಗೆ ಐದು ರಾಫೆಲ್ ಯುದ್ದ ವಿಮಾನಗಳು ಬಂದಿಳಿದ ಕೆಲವೇ ಗಂಟೆಗಳ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕೇಳಿದ್ದ ಮೂರು ಪ್ರಶ್ನೆಗಳನ್ನು ಪರಿಷ್ಕರಿಸಿ ಕೇಳಿದ್ದಾರೆ.
ರಾಹುಲ್ ಗಾಂಧಿ ಅವರು ಟ್ವೀಟ್ನಲ್ಲಿ ಕೇಳಿದ ಪ್ರಶ್ನೆಗಳು, ಭಾರತೀಯ ವಾಯುಪಡೆಗೆ ಐದು ರಾಫೆಲ್ ಯುದ್ದ ವಿಮಾನಗಳು ಸೇರ್ಪಡೆಗೊಂಡಿದ್ದಕ್ಕೆ ಅಭಿನಂದನೆಗಳು. ಏತನ್ಮಧ್ಯೆ ನಾನು ಕೇಳುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕೊಡಬಹುದೇ ಎಂದು ಕೇಳಿದ್ದು ಬಳಿಕ, ಪ್ರತಿ ರಾಫೆಲ್ ಯುದ್ದ ವಿಮಾನಕ್ಕೆ 526 ಕೋಟಿ. ರೂ.ಗಳ ಬದಲು 1670 ಕೋಟಿ.ರೂ.ಗಳು ಖರ್ಚು ಏಕೆ? 126 ರಾಫೆಲ್ ಯುದ್ದ ವಿಮಾನಗಳನ್ನು ಖರೀದಿ ಮಾಡುವ ಬದಲು 36 ವಿಮಾನಗಳನ್ನು ಯಾಕೆ ಖರೀದಿ ಮಾಡಲಾಗಿದೆ? ಎಚ್ಎಎಲ್ ಬದಲಾಗಿ ದಿವಾಳಿಯಾದ ಅನಿಲ್ ಅಂಬಾನಿಗೆ 30,000 ಕೋಟಿ. ರೂ ಗುತ್ತಿಗೆ ಏಕೆ ನೀಡಲಾಯಿತು? ಎನ್ನುವ ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ರಾಫೆಲ್ ಯುದ್ದ ವಿಮಾನ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ನೊಂದಿಗಿನ ಒಪ್ಪಂದ ಸುಪ್ರೀಂ ಕೋರ್ಟ್ ತನಕ ಹೋಗಿದ್ದು, ಕೇಂದ್ರ ಸರ್ಕಾರಕ್ಕೆ ಈಗಾಗಲೇ ಅದು ಕ್ಲೀನ್ ಚಿಟ್ ನೀಡಿದೆ. ಈ ಒಬ್ಬಂದದ ವಿಚಾರವಾಗಿ ಸೂಕ್ತವಾದ ತನಿಖೆಯಾಗಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಒತ್ತಾಯ ಮಾಡುತ್ತಲೇ ಇದೆ.