ಬೆಂಗಳೂರು, ಜು 30 (DaijiworldNews/PY): ಮದ್ಯವನ್ನು ಆನ್ಲೈನ್ ಮೂಲಕ ಮನೆ ಮನೆಗೆ ಪೂರೈಕೆ ಮಾಡುವ ವಿಚಾರವಾಗಿ ಕರ್ನಾಟಕ ಸರ್ಕಾರ ಗಂಭೀರವಾದ ಚಿಂತನೆ ನಡೆಸಿದ್ದು, ಸೋಮವಾರ ಇದಕ್ಕೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಲಿದೆ. ರಾಜ್ಯದಲ್ಲಿ ಮೊಬೈಲ್ ಆಪ್ ಮೂಲಕ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಿದ್ದು, ರಾಜ್ಯಾದ್ಯಂತ ಮುಂದಿನ ಹಂತದಲ್ಲಿ ಚಿಲ್ಲರೆ ಮಾರಾಟ ಮಳಿಗೆ ಹಾಗೂ ಎಂಎಸ್ಐಎಲ್ ಮಳಿಗೆಗಳ ಮೂಲಕ ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ವಿಚಾರದ ಬಗ್ಗೆ ಚಿಂತನೆ ನಡೆಸಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸುವಂತೆ ಅಬಕಾರಿ ಆಯುಕ್ತ ಎಂ.ಲೋಕೇಶ್ ತಿಳಿಸಿದ್ದಾರೆ. ಎಲ್ಲರಿಂ ಸಕರಾತ್ಮಕವಾದ ಅಭಿಪ್ರಾಯ ವ್ಯಕ್ತವಾದಲ್ಲಿ, ಈ ಸೇವೆಯನ್ನು ಇದೇ ಆಗಸ್ಟ್ನಿಂದ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಸೇರಿದಂತೆ ಕೇರಳ ಹಾಗು ಆರು ರಾಜ್ಯಗಳಲ್ಲಿ ಈಗಾಗಲೇ ಈ ಸೇವೆ ಜಾರಿಯಲ್ಲಿದೆ.
ಕೊರೊನಾದಿಂದ ಈಗಾಗಲೇ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಪ್ರಸ್ತಾವನೆಯನ್ನು ಕೈಬಿಡಿ, ಇದರಿಂದಾಗಿ ಮುಂಬರುವ ದಿನಗಳಲ್ಲಿಯೂ ಕೂಡಾ ನಮಗೆ ತೊಂದರೆ ಎದುರಾಗಲಿದ ಎಂದು ಹೇಳಿದ್ದಾರೆ. ಆದರೆ, ಈ ವಿಚಾರವಾಗಿ ಸರ್ಕಾರ ಪ್ರಸ್ತಾವನೆಯನ್ನು ಕೈಬಿಡದೇ ಈ ಬಗ್ಗೆ ಚರ್ಚೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ಈ ಸೇವೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದೆ.
ಕೊರೊನಾದಿಂದ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಈ ಕಾರಣದಿಂದ ಅವರು ಇನ್ನೂ ತೊಂದರೆಗೆ ಒಳಗಾಗಲಿದ್ದಾರೆ ಎಂದು ರಾಜ್ಯ ವೈನ್ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಹೋಂ ಡೆಲಿವರಿ ಸೇವೆ ಜಾರಿಗೆ ಬಂದರೆ ಮದ್ಯದಂಗಡಿಗಳ ಮುಂದೆ ಗುಂಪುಗೂಡುವುದು ನಿಲ್ಲುತ್ತದೆ. ಅಲ್ಲದೇ, ಕುಡಿದು ವಾಹನ ಚಲಾಯಿಸುವುದು, ಅಪಘಾತದ ಪ್ರಕರಣಗಳು ತಪ್ಪುತ್ತವೆ. ಇವೆಲ್ಲದರೊಂದಿಗೆ ಸರ್ಕಾರಕ್ಕೆ ಅಧಿಕ ಆದಾಯವೂ ಬರುತ್ತದೆ. ಕೊರೊನಾದ ಈ ಪರಿಸ್ಥಿತಿಯಲ್ಲಿ ಜನರು ಸುರಕ್ಷಿತವಾಗಿರಲೂ ಕೂಡಾ ಇದು ನೆರವಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾದಿಂದ ಸರ್ಕಾರದ ಆದಾಯದಲ್ಲಿ ಕುಸಿತ ಕಂಡಿದ್ದು, ಅಬಕಾರಿಯ ಮೂಲಕ ಆದಾಯ ಗಳಿಸುವಲ್ಲಿ ಸರ್ಕಾರ ಮುಂದಾಗಿದ್ದು, ಆನ್ಲೈನ್ ಸೇವೆ ಇದಕ್ಕೆ ಸಹಾಯವಾಗಬಹುದು ಎನ್ನುವ ಭರವಸೆ ಹೊಂದಿದೆ.