ನವದೆಹಲಿ, ಜು 30 (Daijiworld News/MSP): ರಕ್ಷಣಾ ಒಪ್ಪಂದದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಮತಾ ಪಕ್ಷದ ಮಾಜಿ ಅಧ್ಯಕ್ಷ ಜಯಾ ಜೇಟ್ಲಿಗೆ ಹಾಗೂ ಮತ್ತಿಬ್ಬರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸುಮಾರು 20 ವರ್ಷಗಳಷ್ಟು ಹಳೆಯದಾದ ಈ ರಕ್ಷಣಾ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದ ಗರಿಷ್ಠ ಅಂದರೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಸಿಬಿಐ ಕೋರಿತ್ತು. ಆದರೆ ಜು. 30ರಂದು ದೆಹಲಿ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಥರ್ಮಲ್ ಇಮೇಜರ್ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ್ದಕ್ಕಾಗಿ ಆರೋಪದಲ್ಲಿ ಜಯಾ ಜೇಟ್ಲಿ ಹಾಗೂ ಆಕೆಯ ಪಕ್ಷದ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್ ಪಿ ಮುರ್ಗೈ ಅವರನ್ನು ದೋಷಿ ಎಂದು ಸಿಬಿಐ ಸ್ಪೆಷಲ್ ಜಡ್ಜ್ ವೀರೇಂದ್ರ ಭಟ್ ತೀರ್ಪು ನೀಡಿದ್ದಾರೆ.
2001 ರಲ್ಲಿ ಸುದ್ದಿ ಪೋರ್ಟಲ್ ತೆಹಲ್ಕಾದಲ್ಲಿ ಪ್ರಸಾರವಾದ 'ಆಪರೇಷನ್ ವೆಸ್ಟೆಂಡ್' ಮೂಲಕ ಜನವರಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಆರೋಪ ಸಾಬೀತಾಗಿದ್ದು ಮೂವರಿಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಗುರುವಾರ ಸಂಜೆ 5 ಗಂಟೆಯೊಳಗೆ ಶರಣಾಗುವಂತೆ ಕೋರ್ಟ್ ನಿರ್ದೇಶನ ನೀಡಿದೆ.