ಮೈಸೂರು, ಜು 30 (DaijiworldNews/PY): ಕೊರೊನಾ ನಿಯಂತ್ರಣ ಮಾಡುವ ಕಾರ್ಯವನ್ನು ಬಿಟ್ಟು ಬಿಜೆಪಿಯು ಚುನಾಯಿತ ಸರ್ಕಾರಗಳನ್ನು ಪತನಗೊಳಿಸುವ ರಾಜಕೀಯ ಮಾಡುತ್ತಿದೆ. ಇದು ತಪ್ಪಲ್ಲವೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಯಾವುದೇ ರಾಜ್ಯದಲ್ಲಿ ಕೊರೊನಾ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಆರೋಪಿಸುತ್ತಿಲ್ಲ ಎಂದರು.
ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಮೂರು ತಿಂಗಳ ಹಿಂದೆ ಸಹಕಾರ ನೀಡಿದ್ದೇವೆ. ಆದರೆ, ಕರ್ನಾಟಕದಲ್ಲಿ ಮಾತ್ರವೇ ಕಾಂಗ್ರೆಸ್ ಸಹಕಾರ ಕೊಟ್ಟಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ನಾವು ಭ್ರಷ್ಟಾಚಾರಕ್ಕೆ ಸಹಕಾರ ನೀಡುವುದಿಲ್ಲ ಎಂದು ಹೇಳಿದರು.
ಕೊರೊನಾ ಇದ್ದ ಸಂದರ್ಭ ಬಿಜೆಪಿ ಮಧ್ಯ ಪ್ರದೇಶ ಸರ್ಕಾರವನ್ನು ಕಿತ್ತೊಗೆಯಲಾಯಿತು. ಇದೀಗ ರಾಜಸ್ಥಾನ ಸರ್ಕಾರವನ್ನು ಪತನ ಮಾಡಲು ಮುಂದಾಗಿದೆ. ಇಂತಹ ಕೆಲಸಗಳನ್ನೆಲ್ಲಾ ಸರ್ಕಾರ ಮಾಡಬೇಕಾ ಎಂದು ಕೇಳಿದರು.
ಕೊರೊನಾ ವಿಚಾರವಾಗಿ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತಲೇ ಬಂದಿದ್ದೇವೆ. ಆದರೆ ಕೊರೊನಾ ಸೋಂಕು ಹೆಸರಿನಲ್ಲಿ ಹಣ ದುರುಪಯೋಗದ ಬಗ್ಗೆ ತಿಳಿದು ಬಂದಿದ್ದು, ಇದಕ್ಕಾಗಿ ಲೆಕ್ಕ ಕೊಡಿ ಅಭಿಯಾನ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.
ಸಾಧನೆಯ ಹೆಸರು ಹೇಳಿಕೊಂಡು ಕೋಟ್ಯಾಂತರ ರೂ.ಗಳ ಜಾಹೀರಾತು ನೀಡಿದ್ದಾರೆ. ಅಲ್ಲದೇ ಸಮಾರಂಭವನ್ನೂ ಮಾಡಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಇದೆಲ್ಲಾ ಬೇಕಿತ್ತಾ. ರಾಜ್ಯದಲ್ಲಿ ಆಂಬುಲೆನ್ಸ್ ಇಲ್ಲ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ವ್ಯವಸ್ಥೆ ಇಲ್ಲ. ವೈದ್ಯರಿಗೆ ಸೇರಿದಂತೆ ನರ್ಸ್ಗಳಿಗೂ ಕಾಉಡಾ ಪಿಪಿಇ ಕಿಟ್ಗಳಿಲ್ಲ. ಈ ಮಧ್ಯೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ 16 ಲಕ್ಷ ದಾಟಿದೆ. ಸರ್ಕಾರ ಸೋಂಕು ನಿಯಂತ್ರಿಸುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ತಿಳಿದೂ ನಾವು ಸುಮ್ಮನೆ ಕೈಕಟ್ಟಿ ಕೂರಬೇಕಾ ಎಂದು ಕೇಳಿದರು.
ಸರ್ಕಾರದ ಅವಧಿಯಲ್ಲೇ ಪ್ರವಾಹ ಬಂದಿದೆ, ಆದರೆ, ಸಂತ್ರಸ್ಥರಿಗೆ ಇನ್ನೂ ನೆರವು ದೊರೆತಿಲ್ಲ. ಇದೆಲ್ಲಾ ಸರ್ಕಾರದ ಸಾಧನೆಯೇ ಎಂದು ವ್ಯಂಗ್ಯ ಮಾಡಿದರು.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದ್ದಾರೆ. ಇನ್ನು ಕೇಂದ್ರ ಸರ್ಕಾರ ಜಿಎಸ್ಟಿ ಸಂಗ್ರಹವು ಕಡಿಮೆ ಇರುವ ಕಾರಣ ರಾಜ್ಯಗಳಿಗೆ ನೆರೆ ಪರಿಹಾರ ನೀಡಲು ಸಾಧ್ಯವಿಲ್ಲ. ಈ ವಿಚಾರ ಒಕ್ಕೂಟದ ವ್ಯವಸ್ಥೆಗೆ ವಿರುದ್ದವಾದು ಎಂದು ಆರೋಪಿಸಿದರು.