ಬೆಂಗಳೂರು, ಜು. 31 (DaijiworldNews/MB) : ''ಹಲವೆಡೆ ಶ್ರೀರಾಮನ ಕೈಗಳಲ್ಲಿ ಆಯುಧಗಳಾದ ಬಿಲ್ಲು ಮತ್ತು ಬಾಣದ ಫೋಟೋಗಳನ್ನು ಬಳಸಲಾಗುತ್ತಿದ್ದು ರಾಮ ಆಕ್ರಮಣಶೀಲ ಮನೋಭಾವ ಹೊಂದಿದ್ದ ಎನ್ನುವಂತೆ ಬಿಂಬಿತವಾಗುತ್ತದೆ. ಆದರೆ ನಿಜವಾಗಿ ರಾಮ ಆ ರೀತಿ ಇರಲಿಲ್ಲ. ಆದ್ದರಿಂದ ಬಿಲ್ಲು ಬಾಣ ಸಹಿತ ಆಕ್ರಮಣಶೀಲ ಶ್ರೀರಾಮನ ಪೋಟೋ ಬಳಕೆ ಬೇಡ'' ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.
''ರಾಮಮಂದಿರ ನಿರ್ಮಾಣದ ಸಂದರ್ಭ ಪ್ರಚಾರಕ್ಕಾಗಿ ಈ ಫೋಟೋಗಳನ್ನು ಬಳಸಲಾಗುತ್ತಿದೆ. ಆದರೆ ಈ ಫೋಟೋ ಬಳಕೆ ಸೂಕ್ತವಲ್ಲ. ರಾಮ ಆಕ್ರಮಣಶೀಲ ಮನೋಭಾವವನ್ನು ಹೊಂದಿರಲಿಲ್ಲ. ಸೇತುವೆಗಳ ನಿರ್ಮಾಣದ ಮುಖೇನ ಸಮಾಜಕ್ಕೆ ಹಾಗೂ ಎಲ್ಲಾ ಸಮುದಾಯಕ್ಕೂ ಬೇಕಾದ ದೇವರಾಗಿದ್ದಾರೆ'' ಎಂದು ಹೇಳಿದ್ದಾರೆ.
''ಇನ್ನು ಈ ಬಿಲ್ಲು ಬಾಣ ಹಿಡಿದ ಫೋಟೋದ ಬದಲಾಗಿ ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ. ಸೀತೆ, ಲಕ್ಷ್ಮಣ, ಹನುಮಂತನನ್ನು ಒಳಗೊಂಡಿರುವ ಪಟ್ಟಾಭಿಷೇಕದ ಚಿತ್ರ ಏಕತೆಯ ಪ್ರತೀಕ'' ಎಂದು ಸಲಹೆ ನೀಡಿದರು.
''ರಾಮ ಎಲ್ಲಾ ಸಮುದಾಯಗಳಿರುವ ಸುಂದರ ಸಮಾಜದ ಕನಸು ಕಂಡವರಾಗಿದ್ದು ಎಲ್ಲಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಪೂಜೆಯನ್ನು ಎಲ್ಲಾ ಸಮದಾಯವನ್ನು ಒಗ್ಗೂಡಿಸಿ ಮಾಡಬೇಕು'' ಎಂದು ಆಗ್ರಹಿಸಿದ ಅವರು ''ಕಾಂಗ್ರೆಸ್ ಎಂದಿಗೂ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿಲ್ಲ'' ಎಂದು ಹೇಳಿದರು.