ನವದೆಹಲಿ, ಜು 31 (DaijiworldNews/PY): ಕೇಂದ್ರ ಸರ್ಕಾರವು 34 ವರ್ಷಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಬುಧವಾರ ಒಪ್ಪಿಗೆ ನೀಡಿದೆ. ಈ ನೀತಿಯಲ್ಲಿ ಶಾಲಾಪೂರ್ವ ಕಲಿಕೆಯಿಂದ ಪ್ರೌಢಶಿಕ್ಷಣದವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಖಾತರಿ ಇದು ಇನ್ನೊಂದು ಅಂಶವಾಗಿದೆ. ಇದರೊಂದಿಗೆ ಶಿಕ್ಷಣಕ್ಕೆ ಒಟ್ಟು ಜಿಡಿಪಿಯ ಶೇ.6ರಷ್ಟನ್ನು ವ್ಯಯ ಮಾಡಬೇಕು ಎನ್ನುವ ಅಂಶವೂ ಈ ನೀತಿಯಲ್ಲಿ ಸೇರ್ಪಡೆಯಾಗಿದೆ.
ಕೇಂದ್ರ ಸಚಿವ ಸಂಪುಟದಿಂದ ಅಂಗೀಕರಿಸಲ್ಪಟ್ಟ ಎನ್ಇಪಿ, ಶಾಲೆ ಮತ್ತು ಬೋಧನೆ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದ್ದು, 1) ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ನಿಯಮ 2) ಪದವಿ ಕೋರ್ಸ್ಗಳಲ್ಲಿ ಬಹು ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳು, 3) ಎಂಫಿಲ್ ಕಾರ್ಯಕ್ರಮ ಸ್ಥಗಿತ, 4) ಕಡಿಮೆ ಹಕ್ಕಿನ ಬೋರ್ಡ್ ಪರೀಕ್ಷೆಗಳು, 5) ವಿಶ್ವವಿದ್ಯಾಲಯ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ವಿದ್ಯಾರ್ಥಿಗಳು ಗಳಿಸಿರುವ ಕ್ರೆಡಿಟ್ಗಳ ಮುಖಾಂತರ ಅಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಪಡೆದಿರುವ ಕ್ರೆಡಿಟ್ಗಳನ್ನು ಡಿಜಿಟಲ್ ರೂಪದ ಮೂಲಕ ಪಡೆಯಲು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಸ್ಥಾಪನೆಯಾಗಲಿದೆ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ನಲ್ಲಿ ಸಂಗ್ರಹವಾದ ವಿದ್ಯಾರ್ಥಿಗಳ ಕ್ರೆಡಿಟ್ ಅಂಕಗಳನ್ನು ಇನ್ನೊಂದು ವಿಷಯದಲ್ಲಿ ಪಡೆದ ಅಂಕದೊಂದಿಗೆ ಸೇರಿಸಲು ಅಥವಾ ಬೇರೆ ವಿಷಯಕ್ಕೆ ವರ್ಗಾವಣೆ ಮಾಡಲು ಸಾಧ್ಯವಿದೆ. ಅಲ್ಲದೇ, ಇವುಗಳನ್ನು ಅಂತಿಮ ವರ್ಷದ ಡಿಗ್ರಿಗೆ ಒಟ್ಟಾಗಿ ಪರಿಗಣಿಸಬಹುದಾಗಿದೆ.
ಪದವಿ ಪೂರ್ವ ಶಿಕ್ಷಣ ಸೇರಿದಂತೆ ಪದವಿ ಶಿಕ್ಷಣವೂ ಕೂಡಾ ಹೊಸ ಶಿಕ್ಷಣ ನೀತಿಯಲ್ಲಿ ವಿಲೀನವಾಗಿದೆ. ಇದರಲ್ಲಿ ಶಿಕ್ಷಣವು 3 ಅಥವಾ 4 ವರ್ಷಗಳ ಅವಧಿಯದ್ದಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೋರ್ಸ್ ಮುಗಿಸದೆಯೇ ಮಧ್ಯದಲ್ಲಿ ಕೋರ್ಸ್ನಿಂದ ನಿರ್ಗಮಿಸಲು ಅವಕಾಶವಿದೆ. ಈ ರೀತಿ ನಿರ್ಗಮಿಸಿದರೆ ಅದನ್ನು ಕೋರ್ಸ್ ಅಪೂರ್ಣ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ ಅದನ್ನು 1 ವರ್ಷ ಪೂರೈಸಿದ ನಂತರ ವೃತ್ತಿಪರ ಶಿಕ್ಷಣ ಸೇರಿದಂತೆ ಅವರು ಮೊದಲು ಆಯ್ಕೆ ಮಾಡಿಕೊಂಡಿದ್ದ ವಿಷಯದ ಮೇಲೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. 2 ವರ್ಷ ಪೂರೈಸಿದರೆ ಡಿಪ್ಲೊಮಾ ಪ್ರಮಾಣ ಪತ್ರ ಸಿಗಲಿದೆ. ಇನ್ನು 3 ವರ್ಷ ಪೂರೈಸಿದರೆ ಪದವಿ ಪ್ರಮಾಣ ಪತ್ರ ದೊರೆಯಲಿದೆ. ಅಲ್ಲದೇ, ವಿದ್ಯಾರ್ಥಿ ಇಚ್ಚಿಸಿದಲ್ಲಿ ಐಚ್ಚಿಕವಾಗಿ 4 ವರ್ಷದ ಡಿಗ್ರಿಯನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಒಂದೇ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಉದಾ: ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ವಿವಿಗಳು ಇನ್ನು ಮುಂದಕ್ಕೆ ಇರುವುದಿಲ್ಲ. 2030ರ ವೇಳೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು ಬಹು ವಿಷಯಗಳ ಶೈಕ್ಷಣಿಕ ಸಂಸ್ಥೆಗಳಾಗಿ ಬದಲಾವಣೆಯಾಗಬೇಕು ಎನ್ನುವ ಉದ್ದೇಶ ಹೊಂದಿದೆ.
ಎಂಫಿಲ್ ಕೂಡಾ ಇನ್ನು ಮುಂದೆ ರದ್ದಾಗಲಿದ್ದು, 3 ಅಥವಾ 4 ವರ್ಷಗಳಿಗೆ ಪದವಿ ಪೂರ್ವ ಶಿಕ್ಷಣ ಇರಲಿದೆ. ಸ್ನಾತಕೋತ್ತರ ಪದವಿಗಳು ಇನ್ನು 1 ಅಥವಾ 2 ವರ್ಷಗಳು ಇರಲಿವೆ. ಅಲ್ಲದೇ, ಏಕೀಕೃತ 5 ವರ್ಷದ ಬ್ಯಾಚುಲರ್ ಅಥವಾ ಮಾಸ್ಟರ್ ಡಿಗ್ರಿಯ ಆಯ್ಕೆಯೂ ಇರಲಿದೆ.
ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ 2030ರ ವೇಳೆಗೆ ಬಹು ವಿಷಯಗಳ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವಂತ ಉದ್ದೇಶವನ್ನು ಹೊಂದಿದೆ. ದೇಶದ ಎಲ್ಲಾ ಉನ್ನತ ಶಿಕ್ಷಣಸಂಸ್ಥೆಗಳನ್ನು 2040ರ ವೇಳೆಗೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹು ವಿಷಯಗಳ ಶಿಕ್ಷಣ ಸಂಸ್ಥಗಲಾಗಿ ಮಾರ್ಪಾಡು ಮಾಡಿ, ಪ್ರತೀ ವಿಷಯಕ್ಕೆ ಕನಿಷ್ಠ 3000 ವಿದ್ಯಾರ್ಥಿಗಳು ಹೊಂದಿರುವಂತ ಉದ್ದೇಶ ಹೊಂದಿದೆ.
ಭಾರತೀಯ ಉನ್ನತ ಶಿಕ್ಷಣ ಮಂಡಳಿ ಸ್ಥಾಪನೆಯಾಗಲಿದ್ದು, ಇದು ಎಲ್ಲಾ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೇ ಇದು ಯುಜಿಸಿ ಮಾದರಿಯಲ್ಲಿ ಇರಲಿದೆ.
ಈ ನೀತಿಯು ಮಾತೃ ಭಾಷೆ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುತ್ತದೆ. ಅಲ್ಲದೇ ಯಾವುದೇ ವಿದ್ಯಾರ್ಥಿಗಳು ತನ್ನ ಶೈಕ್ಷಣಿಕ ಹಿನ್ನೆಲೆಯಲ್ಲದೇ,ಯಾವುದೇ ವಿಷಯವನ್ನು ಓದಲು ಇದರಲ್ಲಿ ಅವಕಾಶವಿದೆ. ಉದಾ: ಎಂಜಿನಿಯರಿಂಗ್ ವಿದ್ಯಾರ್ಥಿಯು ಇತಿಹಾಸ ಓದಬಹುದು. ಅಲ್ಲದೇ ಕಲಾ ವಿಭಾಗದ ವಿದ್ಯಾರ್ಥಿಯು ಭೌತಶಾಸ್ತ್ರ ಓದಬಹುದು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಎಲ್ಲಾ ವಿವಿಗಳಲ್ಲಿ ಪ್ರವೇಶಕ್ಕೆ ಏಕರೀತಿಯಾದ ಸಾಮಾನ್ಯ ಪರೀಕ್ಷೆ ಮಾಡಲಿದೆ. ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ವಿಭಿನ್ನವಾದ ಪ್ರಶ್ನೆ ಪತ್ರಿಕೆಗಳನ್ನು ನೀಡಲಿದೆ.