ಮಿರ್ಜಾಪುರ, ಜು 31(Daijiworld News/MSP): ದೂರದಲ್ಲಿ ಹಾವು ಕಂಡರೆ ಹೌಹಾರುವುದು ಸಹಜ, ಆದರೆ ಇಲ್ಲೊಬ್ಬ ಕಾರ್ಮಿಕ ಪ್ಯಾಂಟ್ ಒಳಗೆ ಹಾವು ಹೊಕ್ಕಿದೆ ಎಂದು ಅರಿವಾದ ಮೇಲೆ, ಹಾವು ಕಡಿಯದಂತೆ ಜೀವ ರಕ್ಷಿಸಿಕೊಳ್ಳಲು ಸತತ 7 ಗಂಟೆಗಳ ಕಾಲ ಮಿಸುಕಾಡದೆ ನಿಂತ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಸಿಕಂದರ್ಪುರ ಗ್ರಾಮದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಕಂದರ್ ಪುರ್ ಗ್ರಾಮದಲ್ಲಿ ವಿದ್ಯುತ್ ಕಂಬ, ವೈರ್ ಅಳವಡಿಸುವ ಕಾಮಗಾರಿಯಲ್ಲಿ ಲವ್ ಕೇಶ್ ಎಂಬ ಕೂಲಿ ಕಾರ್ಮಿಕನೂ ಭಾಗಿಯಾಗಿದ್ದ. ದಿನದ ಕೆಲಸ ಮುಗಿದ ಬಳಿಕ ಸಹ ಕಾರ್ಮಿಕರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ವಿಶ್ರಮಿಸಿದ್ದ. ಈ ವೇಳೆ ಆತನ ಪ್ಯಾಂಟ್ ಒಳಗೆ ಅನಿರೀಕ್ಷಿತವಾಗಿ ಸರ್ಪವೊಂದು ಹೊಕ್ಕಿದೆ.
ಎಚ್ಚರಗೊಂಡು ನೋಡಿದಾಗ ಹಾವು ಕಾಣಿಸಿದ್ದರಿಂದ ಗಾಬರಿಯಾಗಿ ಭಯಗೊಂಡ ಯುವಕ ಸ್ವಲ್ಪವೂ ಕದಲದೆ ಕಂಬವೊಂದನ್ನು ಆಸರೆಯಾಗಿ ಹಿಡಿದುಕೊಂಡು ರಾತ್ರಿಯಿಡೀ ನಿಂತುಕೊಂಡು ಸಂಕಷ್ಟ ಅನುಭವಿಸಿದ್ದಾನೆ. ಆದರೆ ಹಾವು ಮಾತ್ರ ಆತನ ಪ್ಯಾಂಟ್ ಬಿಟ್ಟು ಕದಲಿರಲಿಲ್ಲ.
ಬೆಳಿಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹಾವು ತಜ್ಞರು, ಲವ್ ಕೇಶ್ ಪ್ಯಾಂಟ್ ಕತ್ತರಿಸಿ ಹಾವನ್ನು ಹೊರ ತೆಗೆದಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ಕರೆಸಿದ್ದರು. ಈ ಸುದ್ದಿ ಗೊತ್ತಾಗ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಅಲ್ಲಿ ಜಮಾಯಿಸಿದ್ದರು. ಅದೃಷ್ಟವಶಾತ್ ಹಾವು ಯುವಕನನ್ನು ಕಚ್ಚಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದ್ರ ವಿಡಿಯೋ ಈಗ ವೈರಲ್ ಆಗಿದೆ.