ಹಾಸನ, ಜು 31(Daijiworld News/MSP): ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ ಐ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯೆ ರಾತ್ರಿ ಕೊಲೆ ಆರೋಪಿಯನ್ನು ಬಂಧಿಸಿ ಬಂದಿದ್ದ ಅವರು ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸ್ ವಲಯದಲ್ಲೇ ದಿಗ್ಭ್ರಮೆ ಉಂಟಾಗಿದೆ.
ಕಿರಣ್ ಅವರು ಕಳೆದ ಒಂದು ವರ್ಷದಿಂದ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚನ್ನರಾಯಪಟ್ಟಣದಲ್ಲಿ ಕಳೆದು ಎರಡು ದಿನಗಳ ಹಿಂದೆ ಎರಡು ಕೊಲೆಗಳಾಗಿತ್ತು. ಕಿರಣ್ ಅವರು ಈ ಕೊಲೆಗಳ ಜಾಡು ಹಿಡಿದಿದ್ದರು. ಮಧ್ಯ ರಾತ್ರಿಯಷ್ಟೇ ಒಂದು ಕೊಲೆ ಪ್ರಕರಣ ಭೇದಿಸಿದ್ದ ಅವರು, ಆರೋಪಿ ಬಂಧನ ಸಂಬಂಧ ಕಾರ್ಯಪ್ರವೃತ್ತರಾಗಿದ್ದರು. ಕೊಲೆ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದು ಸಮವಸ್ತ್ರದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಾವು-ಬದುಕಿನ ನಡುವೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಆಸ್ಪತೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಚನ್ನರಾಯಪಟ್ಟಣಕ್ಕೆ ಐಜಿ-ಎಸ್ಪಿ ಭೇಟಿ ನೀಡಲಿದ್ದರು. ಆದರೆ ಅದಕ್ಕೂ ಮುನ್ನ ಕಿರಣ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ