ನವದೆಹಲಿ, ಜು. 31 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣವು ಶೇ 64.54ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.
ವಿವಿಧ ಸಚಿವರೊಂದಿಗೆ ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ಕುರಿತಾದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಅವರು, ಕಳೆದ 21 ದಿನಗಳಲ್ಲಿ ಚೇತರಿಕೆ ಪ್ರಮಾಣ ದ್ವಿಗುಣಗೊಂಡಿದ್ದು, ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶೇ 64.54ರಷ್ಟು ಏರಿಕೆ ಕಂಡಿದೆ ಎಂದು ಹೇಳಿದರು.
ದೇಶದಲ್ಲಿ ಗುರುವಾರ ಒಂದೇ ದಿನದಲ್ಲಿ 55,079 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 16,38,871ಕ್ಕೆ ಏರಿಕೆ ಕಂಡಿದೆ. ಹಾಗೆಯೇ 779 ಸೋಂಕಿತರು ಸಾವನ್ನಪ್ಪಿದ್ದು ಈ ಮೂಲಕ ದೇಶದಲ್ಲಿ ಸೋಂಕು ತಗುಲಿ ಸಾವನ್ನಪ್ಪಿದವರ ಸಂಖ್ಯೆ 35,747ಕ್ಕೆ ಏರಿದೆ.
ಇನ್ನು ದೇಶದಲ್ಲಿ 16,38,871 ಸೋಂಕಿತರ ಪೈಕಿ ಈವರೆಗೆ 10,57,805 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 5,45,318 ಸಕ್ರಿಯ ಪ್ರಕರಣಗಳಾಗಿದೆ.
ವಿಡಿಯೊ ಕಾನ್ಫೆರೆನ್ಸ್ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.