ನವದೆಹಲಿ, ಜು 31 (DaijiworldNews/PY): ಆಗಸ್ಟ್ 1ರಂದು ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಎನ್ನುವ ಸಾಮಾಜಿಕ ಅನಿಷ್ಟದಿಂದ ಬಿಡುಗಡೆಯಾದ ದಿನವಾಗಿದ್ದು, ಈ ದಿನವನ್ನು ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನವೆಂದು ಪರಿಗಣಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ಮುಸ್ಲಿಂ ಮಹಿಳಾ ಕಾಯ್ದೆ 2019ರ ಮೊದಲ ವರ್ಷಾಚರಣೆಯ ನಿಟ್ಟಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ತ್ರಿವಳಿ ತಲಾಖ್ನ ವಿರುದ್ದವಾಗಿ ಕಾನೂನು ರೂಪಿಸಿರುವುದರಿಂದ ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿದೆ ಹಾಗೂ ಅವರ ಸ್ವಾವಲಂಬನೆಯೂ ಕೂಡಾ ಬಲಗೊಂಡಿದೆ ಎಂದರು.
ತ್ರಿವಳಿ ತಲಾಕ್ ಅನ್ನು ರಾಜಕೀಯ ಲಾಭಕ್ಕೋಸ್ಕರ ಮೋಟ್ ಬ್ಯಾಂಕ್ ವ್ಯಾಪಾರಿಗಳು ಉಪಯೋಗಿಸಿಕೊಳ್ಳುತ್ತಿದ್ದರು. ಪ್ರಧಾನಿ ಮೋದಿ ಸರ್ಕಾರವು ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಿದೆ. ರಾಜಕೀಯ ಸಬಲೀಕರಣಕ್ಕೆ ಮೋದಿ ಸರ್ಕಾರವು ಬದ್ದವಾಗಿದೆ ಎಂದು ತಿಳಿಸಿದರು.
ಹಲವಾರು ದಿಟ್ಟ ಹಾಗೂ ಬಹು ದೊಡ್ಡ ಸುಧಾರಣೆಗಳು ನಮ್ಮ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಪ್ರಯತ್ನಗಳ ಪ್ರತಿಬಿಂಬವಾಗಿವೆ. ಇದು ಉತ್ತಮವಾ ಫಲಿತಾಂಶವನ್ನು ನೀಡಿದೆ ಎಂದರು.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಸ್ಮೃತಿ ಇರಾನಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮುಸ್ಲಿಂ ಮಹಿಳೆಯರನ್ನುದ್ದೇಶಿ ಮಾತನಾಡಿದರು.