ನವದೆಹಲಿ, ಜು. 31 (DaijiworldNews/MB) : ''ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆ ನಡೆಸುವ ಅಗತ್ಯವಿಲ್ಲ. ಪರಿಸ್ಥಿತಿ ಸುಧಾರಿಸಿದ ಬಳಿಕ ಆಯೋಜಿಸಬಹುದು'' ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ.
ಮರಾಠಿ ಸುದ್ದಿ ವಾಹಿನಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, ''ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಆನ್ಲೈನ್ ಭೂಮಿ ಪೂಜೆ ಮಾಡಬಹುದು ಎಂದು ನೀಡಿದ ಸಲಹೆಯನ್ನು ತಿರಸ್ಕರಿಸಿ ಭೂಮಿ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಸಬೇಕು'' ಎಂದು ಹೇಳಿದರು.
''ಜನರು ಈಗ ಕೊರೊನಾ ಕಾರಣದಿಂದ ಸಂದಿಗ್ಧ ಮನಸ್ಥಿತಿಯಲ್ಲಿದ್ದು ಈ ಸಮಯದಲ್ಲಿ ಭೂಮಿ ಪೂಜೆಯ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಎರಡು ತಿಂಗಳ ಬಳಿಕ ಭೂಮಿ ಪೂಜೆ ನಡೆಸಬಹುದು. ಆ ಸಂದರ್ಭದಲ್ಲಿ ಜನರು ಸಮಾರಂಭವನ್ನು ಆನಂದಿಸುತ್ತಿದ್ದರು'' ಎಂದು ಅಭಿಪ್ರಾಯಪಟ್ಟರು.
ಇನ್ನು ಮಹಾರಾಷ್ಟ್ರ ಸರ್ಕಾರ ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರದ ದೋಷಗಳನ್ನು ಉಲ್ಲೇಖಿಸಿದ ಅವರು, ''ಈ ಸೋಂಕಿನ ಬಗ್ಗೆ ಜನರಲ್ಲಿ ಇರುವ ಆತಂಕವನ್ನು ನಿವಾರಿಸುವುದು ಅಗತ್ಯವಾಗಿದೆ. ಜನರನ್ನುಈ ಭಯದಿಂದ ಹೊರಬರಲು ಸಹಾಯ ಮಾಡುವುದು ಬಹಳ ಮುಖ್ಯ. ಇದಕ್ಕೆಲ್ಲಾ ಟಿವಿ ಚಾನೆಲ್ಗಳಲ್ಲಿನ ಸುದ್ದಿಗಳು ಮತ್ತು ವಾಟ್ಸಾಪ್ನಲ್ಲಿನ ಸಂದೇಶಗಳ ಮೇಲೆ ಹೇರಿರುವ ನಿರ್ಬಂಧ ಕಾರಣವಾಗಿದೆ'' ರಾಜ್ಯ ಸರ್ಕಾರ ಎಂದು ದೂರಿದರು.
ರಾಜ್ಯದಲ್ಲಿನ ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ''ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಬೇಕು'' ಎಂದು ಹೇಳಿದರು.
ತಮ್ಮ ಸೋದರಸಂಬಂಧಿ ಆಗಿರುವ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಅವ ಪಾತ್ರ ನಿರ್ವಹಿಸುತ್ತಿದ್ದಾರೆಯೇ ಎಂದು ಮಾಧ್ಯಮ ಕೇಳಿದಾಗ "ಟಿವಿಯಲ್ಲಿ ಮಾತ್ರ" ಎಂದು ವ್ಯಂಗ್ಯ ಮಾಡಿ "ಕಳೆದ ನಾಲ್ಕೈದು ತಿಂಗಳಲ್ಲಿ ನಾನು ಅವರ ಯಾವ ಕೆಲಸವನ್ನು ನೋಡಿಲ್ಲ'' ಎಂದು ಹೇಳಿದರು.