ಮಂಡ್ಯ, ಜು 31 (DaijiworldNews/PY): ವೈದ್ಯಕೀಯ ಉಪಕರಣಗಳ ಖರೀದಿ ಹಗರಣ ವಿಚಾರವಾಗಿ ಸಿಎಂ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದ್ದು, ಪಕ್ಷದ ವಿರುದ್ದ ಆರೋಪ ಮಾಡಿಲ್ಲ. ಸರ್ಕಾರದಿಂದ ನೋಟೀಸ್ ಬರಬೇಕಿತ್ತು. ಆದರೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರಿಂದ ನೋಟಿಸ್ ಬಂದಿದೆ ಎಂದು ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ರೀತಿಯಾದ ನೋಟಿಸ್ಗೆ ನಾವು ಭಯಪಟ್ಟುಕೊಳ್ಳುವುದಿಲ್ಲ. ಯಾವುದೇ ಪರಿಸ್ಥಿತಿ ಎದುರಾದರೂ ಕೂಡಾ ನಾವು ಎದುರಿಸುತ್ತೇವೆ. ಕೊರೊನಾ ಹೆಸರಿನಲ್ಲಿ ಲೂಟಿ ಮಾಡುವವರನ್ನು ನೋಡಿ ಕೂಡಾ ನಾವು ಕೈಕಟ್ಟಿ ಕೂರುವುದಿಲ್ಲ. ಆದರೆ, ಈ ಬಗ್ಗೆ ತಿಳಿದೂ ಕೂಡಾ ಸುಮ್ಮನೆ ಕೂರುವುದಿಲ್ಲ ಎಂದು ತಿಳಿಸಿದರು.
ಈಗ ವಿಧಾನ ಸಭೆ ಅಧಿವೇಶನವನ್ನೂ ಕೂಡಾ ಕರೆಯುತ್ತಿಲ್ಲ. ಇಲ್ಲದಿದ್ದರೆ ಭ್ರಷ್ಟಾಚಾರದ ವಿಚಾರಾದ ಬಗ್ಗೆ ಮಾತನಾಡುತ್ತಿದೆ. ಕೊರೊನಾ ಇರುವ ಕಾರಣ ಈ ಬಗ್ಗೆ ಪ್ರತಿಭಟನೆ ಕೂಡಾ ಮಾಡಲು ಸಾಧ್ಯವಿಲ್ಲ. ಈ ನಡುವೆ ಸೈಕಲ್ ಜಾಥಾ ಮಾಡಿದ್ದ ಕಾರಣ ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ. ಈ ರೀತಿಯಾದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುವುದಾದರೂ ಹೇಗೆ? ಈ ಕಾರಣದಿಂದ ಮಾಧ್ಯಮ ಸಂವಾದದ ಮೂಲಕ ಪ್ರಯತ್ನಸುತ್ತಿದ್ದೇನೆ ಎಂದರು.
ಇನ್ನು ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಅವರು ಸಂವಿಧಾನವನ್ನೊಮ್ಮೆ ಓದಲಿ. ನಾನು ಮಾತ್ರವಲ್ಲದೇ, ಯಾರೂ ಕೂಡಾ ಸರ್ಕಾರದ ಕಾರ್ಯದ ಬಗ್ಗೆ ಪ್ರಶ್ನಿಸಬಹುದಾಗಿದೆ ಎಂದು ಹೇಳಿದರು.
ಪ್ರಸ್ತುತ ಪರಿಸ್ಥಿತಿಯ ವೇಳೆ ನಾನು ಸಿಎಂ ಆಗಿದ್ದರೆ ತಲಾ 10 ಸಾವಿರ ಹಣವನ್ನು ರಾಜ್ಯದ ಒಂದು ಕೋಟಿ ಜನರಿಗೆ ನೀಡುತ್ತಿದ್ದೆ. ಬಡವರಿಗೆ ನೆರವಾಗುವ ಸಲುವಾಗಿ ಹಲವಾರು ಪತ್ರಗಳನ್ನು ಕೂಡಾ ಬರೆದಿದ್ದೇನೆ. ಆದರೆ, ನಾನು ಬರೆದ ಪತ್ರಕ್ಕೆ ಯಾವುದೇ ಉತ್ತರವಿಲ್ಲ ಎಂದು ಕಿಡಿಕಾರಿದರು.