ನವದೆಹಲಿ, ಜು 31 (DaijiworldNews/PY): ಸೈಕ್ಲಿಸ್ಟ್ ಆಗಬೇಕು ಎಂದು ಕನಸು ಕಂಡಿರುವ ಬಡ ವಿದ್ಯಾರ್ಥಿಯೋರ್ವನಿಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ರೇಸಿಂಗ್ ಸೈಕಲ್ ಅನ್ನು ಬಹುಮಾನವಾಗಿ ನೀಡಿ ಹಾರೈಸಿದ್ದಾರೆ.
ರಿಯಾಜ್ ಎಂಬ ವಿದ್ಯಾರ್ಥಿ ದೆಹಲಿಯ ಶಾಲೆಯೊಂದರಲ್ಲಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದು, ಸೈಕ್ಲಿಸ್ಟ್ ಆಗಬೇಕು ಎಂದು ಕನಸು ಕಂಡಿರುವ ಈತನಿಗೆ ರಾಷ್ಟ್ರಪತಿ ಅವರು ಈದ್ ಹಬ್ಬದಂದೇ ಬಹುಮಾನ ನೀಡಿದ್ದು, ವಿಶ್ವಮಟ್ಟದ ಸೈಕ್ಲಿಸ್ಟ್ ಆಗಬೇಕು ಎಂದು ಶುಭಹಾರೈಸಿದ್ದಾರೆ.
ರಿಯಾಜ್ ಬಿಹಾರದ ಮಧುಬಾನಿ ಜಿಲ್ಲೆಯವನಾಗಿದ್ದು, ದೆಹಲಿಯ ಆನಂದ್ ವಿಹಾರನಲ್ಲಿರುವ ಸರ್ವೋದಯ ಬಾಲ್ ವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಈತನ ಪೋಷಕರು, ಇಬ್ಬರು ಸಹೋದರಿಯರು ಹಾಗೂ ಸಹೋದರರು ಮಧುಬಾನಿಯಲ್ಲಿ ನೆಲೆಸಿದ್ದರೆ, ರಿಯಾಜ್ ಗಾಜಿಯಾಬಾದ್ನ ಮಹಾರಾಜಪುರದಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸವಿದ್ದಾನೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ಹೇಳಲಾಗಿದೆ.
ಬಡ ಕುಟುಂಬದಲ್ಲಿರುವ ರಿಯಾಜ್ ಸೈಕ್ಲಿಂಗ್ ಆಗುವ ಕನಸು ಕಂಡಿದ್ದ. ಈತ ತನ್ನ ಓದಿನೊಂದಿಗೆ ಸೈಕ್ಲಿಂಗ್ ಅಭ್ಯಾಸವನ್ನೂ ಮಾಡುತ್ತಾನೆ. 2017ರಲ್ಲಿ ಈತ ರಾಜ್ಯ ಸೈಕ್ಲಿಂಗ್ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಎಂದು ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ರಿಯಾಜ್ ಪ್ರತಿದಿನ ದೆಹಲಿಯ ಇಂದಿರಾ ಗಾಂದಿ ಇಂಡೋರ್ ಸ್ಟೇಡಿಯಂನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದು, ಈತನಿಗೆ ಪ್ರಮೋದ್ ಶರ್ಮಾ ತರಬೇತಿ ನೀಡುತ್ತಿದ್ದಾರೆ. ಆದರೆ, ರಿಯಾಜ್ ಪ್ರತಿದಿನದ ತರಬೇತಿಗಾಗಿ ಬಾಡಿಗೆ ಸೈಕಲ್ ಪಡೆದುಕೊಳ್ಳುತ್ತಿದ್ದನು.
ಈ ವಿಚಾರವನ್ನು ಮಾಧ್ಯಮದ ಮುಖಾಂತರ ರಾಷ್ಟ್ರಪತಿಗಳು ತಿಳಿದುಕೊಂಡಿದ್ದು, ಈದ್ ಹಬ್ಬದಂದೇ ರಿಯಾಜ್ಗೆ ರೇಸಿಂಗ್ ಸೈಕಲ್ ಅನ್ನು ಬಹುಮಾನವಾಗಿ ನೀಡಿದ್ದಾರೆ.