ನವದೆಹಲಿ, ಆ 01(DaijiworldNews/HR): ಆಗಸ್ಟ್ 3ರಂದು ರಕ್ಷಾ ಬಂಧನದ ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಸಹಿತ ಅನೇಕ ಸೋದರಿಯರು ರಾಖಿ ಕಟ್ಟುವ ಸಂಪ್ರದಾಯ ಬೆಳೆದು ಬಂದಿದೆ.
ಕಳೆದ 25 ವರ್ಷದಿಂದ ಪ್ರಧಾನಿ ಮೋದಿ ಅವರೊಂದಿಗೆ ರಾಖಿ ಹಬ್ಬ ಆಚರಿಸುತ್ತಿರುವ ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳೆ ಖಮರ್ ಮೊಹ್ಸಿನ್ ಶೇಖ್ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಅವರ ಕೈಗೆ ರಾಖಿ ಕಟ್ಟಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಅಂಚೆಯ ಮೂಲಕವೇ ರಕ್ಷಾಬಂಧವನ್ನು ಕಳುಹಿಸಿಕೊಟ್ಟಿದ್ದಾರೆ.
ಪಾಕಿಸ್ತಾನ ಮೂಲದವರಾದ ಮೊಹ್ಸಿನ್ ಶೇಖ್ ಭಾರತೀಯನನ್ನು ಮದುವೆಯಾದ ನಂತರ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗಿನಿಂದಲೂ ಅವರು ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ.
ನಮಗೆ 30-35 ವರ್ಷದಿಂದ ನರೇಂದ್ರ ಮೋದಿ ಅವರ ಪರಿಚಯವಿದೆ. ನಾನು ಅವರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ನಾನು ಕರಾಚಿಯಿಂದ ಬಂದವಳು, ಮದುವೆಯಾಗಿ ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಪರಿಚಯ ಮಾಡಿಕೊಂಡೆ. ಪಾಕಿಸ್ತಾನದ ಕರಾಚಿಯಿಂದ ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಅರಿತ ಬಳಿಕ ನನ್ನನ್ನು ಅವರು ಸೋದರಿ (ಬೆಹೆನ್) ಎಂದು ಕರೆಯುತ್ತಾರೆ. ನನಗೆ ಅಣ್ಣ-ತಮ್ಮ ಯಾರೂ ಇಲ್ಲದ್ದರಿಂದ ಅವರನ್ನೇ ನಾನು ಅಣ್ಣ ಎಂದು ಭಾವಿಸಿದ್ದೇನೆ.
ಕೊರೊನಾ ಸಾಂಕ್ರಮಿಕ ರೋಗ ಇಲ್ಲದೇ ಹೋಗಿದ್ದರೆ, ಸ್ವತಃ ದೆಹಲಿಗೆ ತೆರಳಿ ಸತತ 25ನೇ ವರ್ಷವೂ ನರೇಂದ್ರ ಮೋದಿ ಅವರ ಬಲಗೈಗೆ ಪವಿತ್ರ ದಾರವನ್ನು ಕಟ್ಟಿ, ಶುಭ ಹಾರೈಸಿ ಬರುತ್ತಿದ್ದೆ. ಆದರೆ ಈ ಬಾರಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಮೊಹ್ಸಿನ್ ಶೇಖ್.