ಬೆಂಗಳೂರು, ಆ 1 (Daijiworld News/MSP): ಬೀದಿ - ಬೀದಿಗಳಲ್ಲಿ ತೂಗಾಡುತ್ತಿರುವ ತಂತಿ ಬಗ್ಗೆ ಯಾವುದೇ ಅಪಾಯವಿಲ್ಲ ಎಂದು ಭಾವಿಸಿ ಬೆಂಗಳೂರಿನ ಸಣ್ಣ ಹೊಟೇಲ್ ನಡೆಸುತ್ತಿರುವ ಸುನೀತಾ ಕೆ ಅವರನ್ನು ಕೇಳಿ ಬೆಚ್ಚಿ ಬೀಳುವುದು ಖಂಡಿತಾ. ತಮ್ಮ ಪಾಡಿಗೆ ರಸ್ತೆ ಬದಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಇವರ ತಲೆಯಲ್ಲಿ 52 ಹೊಲಿಗೆ ಹಾಕಿಸಿ ನೋವಿನಿಂದ ನರಳುತ್ತಿರುವುದು ಕೇವಲ ತೂಗಾಡುತ್ತಿದ್ದ ತಂತಿಯಿಂದ ಎಂದರೆ ತಪ್ಪಿಲ್ಲ.
ಬೆಂಗಳೂರಿನ ಟಿಸಿ ಪಾಳ್ಯ ಜಂಕ್ಷನ್ ಬಳಿ ಅನ್ನಪೂರ್ಣೇಶ್ವರಿ ಹೋಟೆಲ್ ನಡೆಸುತ್ತಿರುವ 42 ವರ್ಷದ ಸುನಿತಾ ಎಂಬವರು ತಮ್ಮ ಹೋಟೆಲ್ಗೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಅಲ್ಲೇ ಸನಿಹದಲ್ಲಿ ರಸ್ತೆ ಬದಿಯಲ್ಲಿ ಜೋತು ಬಿದ್ದಿದ್ದ ತಂತಿಯೊಂದು ಆಟೋ ಚಕ್ರದಲ್ಲಿ ಸಿಲುಕಿದ್ದು ಅದನ್ನು ಆಟೋ ಚಾಲಕರೊಬ್ಬರು ತೆಗೆಯಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಮಿನಿ ಲಾರಿಯೊಂದು ವೇಗವಾಗಿ ರಸ್ತೆಯಲ್ಲಿ ಸಾಗಿ ತಂತಿಯನ್ನು ಬಲವಂತವಾಗಿ ಎಳೆದಂತಾಗಿದೆ.
ಇದೇ ಸಂದರ್ಭ ಆಟೋ ಚಾಲಕನನ್ನು ದಾಟಿ ಸುನಿತಾ ಒಂದು ನಾಲ್ಕೈದು ಅಡಿ ದೂರ ಹೋಗಿದ್ದಾರೆ . ಅಷ್ಟರಲ್ಲಿ ಯಾರೋ ಕರೆದಂತಾಗಿ ಸುನಿತಾ ಹಿಂದಿರುಗಿದ್ದಾರೆ. ಒಂದೇ ಕ್ಷಣದಲ್ಲಿ ಆಟೋ ಚಾಲಕ ತಂತಿಯಲ್ಲಿ ಸಿಲುಕಿ ಹಾರಿ ಸುನಿತಾ ಅವರ ಮೇಲೆ ಬಿದ್ದಿದ್ದರು...!
ಈ ಘಟನೆ ಜು.೧೬ ರಂದು ನಡೆದಿದ್ದು, ಇದರ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುನೀತಾ ಅವರ ಪತಿ ಕೃಷ್ಣಮೂರ್ತಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದು, ಸುನೀತಾ ಅವರನ್ನು ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಅವರ ತಲೆಗೆ ಗಂಭೀರ ಗಾಯಗಳಾದ್ದರಿಂದ 52 ಸ್ಟಿಚ್ ಹಾಕಲಾಗಿದೆ . ಘಟನೆಯಲ್ಲಿ ಆಟೋ ಚಾಲಕನಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.