ನವದೆಹಲಿ, ಆ 01 (DaijiworldNews/PY): ಪಿಡಿಪಿ ನಾಯಕಿ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಬಂಧನದ ಅವಧಿಯನ್ನು ಕೇಂದ್ರ ಸರ್ಕಾರ ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಮೆಹಬೂಬಾ ಮುಫ್ತಿ ಅವರ ಬಂಧನದ ಅವಧಿಯನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ವಿಸ್ತರಿಸಲಾಗಿದೆ. ಅಲ್ಲದೇ, ಮುಫ್ತಿ ಅವರು 370ನೇ ವಿಧಿ ರದ್ದುಗೊಳಿಸುರುವ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಇದು ಮಾತನಾಡುವ ಹಕ್ಕಿನ ಭಾಗವಲ್ಲವೇ ಎಂದು ಕೇಳಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸಿರುವ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸರುವ ಅರ್ಜಿಯ ವಿಚಾರವಾಗಿ ನಾನೇ ವಕೀಲನಾಗಿ ಹಾಜರಾಗುತ್ತಿದ್ದೇನೆ. ನಾನು ಈ ವಿಚಾರವಾಗಿ ಮಾತನಾಡಿದ್ದಲ್ಲಿ ಸಾರ್ವಜನಿಕ ಸುರಕ್ಷತೆಗೆ ಅಪಾಯವಾಗಿತ್ತದೆಯೇ ಎಂದು ಕೇಳಿದ್ದಾರೆ.
ಮೆಹಬೂಬಾ ಮುಫ್ತಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಾವು ಎಲ್ಲರೂ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರದ ಪಿಡಿಪಿ ನಾಯಕ ಮೆಹಬೂಬಾ ಮುಫ್ತಿ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿತ್ತು, ಶುಕ್ರವಾರದಂದು ಕೇಂದ್ರ ಸರ್ಕಾರ ಪುನಃ ಅವರ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದೆ.