ಲಖನೌ, ಆ 01 (DaijiworldNews/PY): ಉತ್ತರ ಪ್ರದೇಶದಲ್ಲಿ ಕೊರೊನಾ ಹಾಗೂ ಅಪರಾಧ ನಿಯಂತ್ರಣದಲ್ಲಿಲ್ಲ. ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಕೊರೊನಾ ಹಾಗೂ ಅಪರಾಧಗಳು ನಿಯಂತ್ರಣದಲ್ಲಿಲ್ಲ. 8 ದಿನಗಳ ಹಿಂದೆ ಬುಲಂದರ್ಶಹರ್ನಲ್ಲಿ ಶ್ರೀ ಧರ್ಮೇಂದ್ರ ಚೌಧರಿ ಅವರನ್ನು ಅಪಹರಣ ಮಾಡಲಾಗಿತ್ತು. ನಿನ್ನೆ ಅವರ ಶವ ಪತ್ತೆಯಾಗಿದೆ. ಅಲ್ಲದೇ, ಕಾನ್ಪುರ ಸೇರಿದಂತೆ ಗೋರಖ್ಪುರ ಹಾಗೂ ಬುಲಂದ್ಶಹರ್ನಲ್ಲಿ ನಡೆಯುವ ಪ್ರತಿ ಘಟನೆಯಲ್ಲೂ ಕಾನೂನು ಹಾಗೂ ಸುವ್ಯವಸ್ಥೆ ಇಲ್ಲ. ಈ ಕಾರಣದಿಂದ ಜಂಗಲ್ ರಾಜ್ ನಿರ್ಮಾಣವಾಗುವ ಗುರುತುಗಳು ಕಂಡುಬರುತ್ತವೆ. ಇನ್ನೂ ಎಷ್ಟು ದಿನಗಳವರೆಗೆ ಸರ್ಕಾರ ನಿದ್ರಿಸುತ್ತದೆ ಎಂದು ತಿಳಿಯಬೇಕು ಎಂದಿದ್ದಾರೆ.
ಬುಲಂದರ್ಶಹರ್ ವಕೀಲ ಧರ್ಮೇಂದ್ರ ಚೌಧರಿ ಅವರು ಜುಲೈ 25ರಂದು ನಾಪತ್ತೆಯಾಗಿದ್ದರು. ಇದಾದ ಬಳಿಕ ಜುಲೈ 31ರಂದು ಅವರ ಮೃತದೇಹ ನಗರದಲ್ಲಿ ಪತ್ತೆಯಾಗಿದ್ದು, ಈ ವಿಚಾರದ ಬಗ್ಗೆ ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.