ಬೆಂಗಳೂರು, ಆ 01 (DaijiworldNews/PY): ನೋಟಿಸ್ ನೀಡಿ ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರ್ಕಾರದ ಮೂರ್ಖತನ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ಮುಖ್ಯಮಂತ್ರಿ ಅವರು ವಿಧಾನ ಪರಿಷತ್ ಸದಸ್ಯರೊಬ್ಬರಿಂದ ವಕೀಲರ ಮೂಲಕ ನನಗೆ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ಕೊಡಿಸಿದ್ದಾರೆ, ಸಂತೋಷ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡ್ತೇವೆ ಎಂದಿದ್ದಾರೆ.
ಮುಖ್ಯಮಂತ್ರಿ, ಸಚಿವರು ಇಲ್ಲವೆ ಮುಖ್ಯಕಾರ್ಯದರ್ಶಿಯವರಿಂದ ಲೀಗಲ್ ನೋಟಿಸ್ ಬರಬಹುದೆಂಬ ನಿರೀಕ್ಷೆ ಇತ್ತು. ಒಬ್ಬ ಎಂಎಲ್ಸಿಯಿಂದ ಕೊಡಿಸಿದ್ದಾರೆ. ಈ ರೀತಿ ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರ್ಕಾರದ ಮೂರ್ಖತನ. ನಮ್ಮ ಹೋರಾಟವನ್ನು ನಾವು ಜನರ ಬಳಿ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾವು ವೈದ್ಯಕೀಯ ಉಪಕರಣಗಳ ಖರೀದಿಯ ಬಗ್ಗೆ ನಡೆದ ಅಕ್ರಮಗಳ ವಿಚಾರವಾಗಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದೇವೆ. ಆದರೆ, ಸರ್ಕಾರದಿಂದ ನೋಟಿಸ್ ಬರಬೇಕಿತ್ತು. ಆದರೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರಿಂದ ನೋಟಿಸ್ ಬಂದಿದೆ. ಇಂತಹ ನೋಟಿಸ್ ಕಳಿಸಿದರೆ ನಾವು ಭಯಪಡುವುದಿಲ್ಲ. ಎಂತಹ ಪರಿಸ್ಥಿತಿ ಎದುರಾದರೂ ಕೂಡಾ ನಾವು ಧೈರ್ಯವಾಗಿ ಎದುರಿಸುತ್ತೇವೆ. ಕೊರೊನಾ ಉಪಕರಣಗಳ ಹೆಸರಿನಲ್ಲಿ ಲೂಟಿ ಮಾಡುವುದನ್ನು ತಿಳಿದೂ ಕೂಡಾ ನಾವು ಕೈಕಟ್ಟಿ ಕೂರುವವರಲ್ಲ ಎಂದು ನಿನ್ನೆ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.
ಈ ರೀತಿಯಾದ ಭ್ರಷ್ಟಾಚಾರವಾಗುತ್ತಿದೆ ಎನ್ನುವುದನ್ನು ಹೇಳಲು ವಿಧಾನ ಸಭೆ ಅಧಿವೇಶನವನ್ನು ಕರೆಯುತ್ತಿಲ್ಲ. ಇನ್ನು ಪ್ರತಿಭಟನೆ ಮಾಡೋಣವೆಂದರೆ ಕೊರೊನಾ ಕಾಟ. ಏತನ್ಮಧ್ಯೆ ಸೈಕಲ್ ಜಾಥಾ ಮಾಡಿದ್ದಕ್ಕೆ ನನ್ನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಹೀಗಾದರೆ ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವುದಾದರೂ ಹೇಗೆ ಎಂದು ತಿಳಿಸಿದ್ದರು.