ನವದೆಹಲಿ, ಆ. 01 (DaijiworldNews/MB) : ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತ್ರಿವಳಿ ತಲಾಖ್ ಮಸೂದೆ ಜಾರಿಗೆ ತರದೆ ಕಾಂಗ್ರೆಸ್ ಸುಮ್ಮನಿತ್ತು ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತ್ರಿವಳಿ ತಲಾಖ್ ರದ್ದು ಕಾನೂನು ಜಾರಿಗೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ವಿಡಿಯೊ ಲಿಂಕ್ ಮೂಲಕ ಮುಸ್ಲಿಂ ಮಹಿಳೆಯರೊಂದಿಗೆ ಸಂವಾದದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಚಿವರಾದ ರವಿ ಶಂಕರ್ ಪ್ರಸಾದ್ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
1980ರಲ್ಲಿಯೇ ಈ ಕಾನೂನು ಜಾರಿಗೆ ತರಬಹುದಾಗಿತ್ತು ಆದರೆ ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕೀಯದಿಂದ ಈ ಮಸೂದೆ ಜಾರಿ ಮಾಡುವತ್ತ ಗಮನ ಹರಿಸಲೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ.
ಕಳೆದ ವರ್ಷ ಈ ಕಾನೂನು ಜಾರಿಗೆ ಬಂದ ಬಳಿಕ ತ್ರಿವಳಿ ತಲಾಖ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ತ್ರಿವಳಿ ತಲಾಖ್ಗೆ ಇಸ್ಲಾಂ ಧರ್ಮ ಎಂದಿಗೂ ಪ್ರೋತ್ಸಾಹ ನೀಡಿಲ್ಲ ಹಾಗೂ ಅದು ಕಾನೂನು ಬದ್ಧವೂ ಕೂಡಾ ಆಗಿರಲಿಲ್ಲ. ಆದರೂ ಕೂಡಾ ಕಾಂಗ್ರೆಸ್ ವೋಟ್ ಬ್ಯಾಂಕ್ ಲಾಭಕ್ಕಾಗಿ ತ್ರಿವಳಿ ತಲಾಖ್ ರದ್ದು ಮಾಡಲು ಮುಂದಾಗಲೇ ಇಲ್ಲ ಎಂದು ದೂರಿದರೆ, ಕೇಂದ್ರ ರಾಜಕೀಯ ಶೋಘಣೆಗೆ ಅಲ್ಲ ರಾಜಕೀಯ ಸಶಕ್ತೀಕರಣಕ್ಕೆ ಬದ್ಧ ಎಂದು ರವಿ ಶಂಕರ್ ಪ್ರಸಾದ್ ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತ್ರಿವಳಿ ತಲಾಖ್ ಮಸೂದೆ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಈದ್ ಮತ್ತು ರಕ್ಷಾಬಂಧನಕ್ಕೆ ನೀಡಿದ ಗಿಫ್ಟ್ ಎಂದು ಹೇಳಿದರು.