ನವದೆಹಲಿ, ಆ. 01 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ತಮ್ಮ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಲೇ ಇದೆ.
ನಟ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಗಳಾಗುತ್ತಿದ್ದಂತೆ ಇದನ್ನು ನಟಿ ಕಂಗನಾ ರಣಾವತ್ ಸೇರಿದಂತೆ ಹಲವರು ವಿರೋಧಿಸಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸುತ್ತಲೇ ಇದ್ದಾರೆ.
ಇದೀಗ ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಸುಶಾಂತ್ ಸಿಂಗ್ ಅವರು ತನ್ನ ಕೊನೆಯ ಕರೆಯಲ್ಲಿ ತನ್ನ ಮದುವೆಯ ವಿಚಾರವಾಗಿ ಮಾತನಾಡಿದ್ದರು ಎಂದು ವರದಿಯಾಗಿದೆ. ತನ್ನ ವಿವಾಹದ ಬಗ್ಗೆ ಆಲೋಚಿಸುವವರು ಅದಾದ ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎಂಬುದು ಹಲವರ ಅನುಮಾನವಾಗಿದೆ.
ಇನ್ನು ಸುಶಾಂತ್ ಅವರು ತಾನು ಸಾವನ್ನಪ್ಪುವ ದಿನ ವಿಡಿಯೋ ಗೇಮ್ ಆಡುತ್ತಿದ್ದರು ಎಂದು ಕೂಡಾ ವರದಿ ತಿಳಿಸಿದೆ.
ಈ ನಡುವೆ ಸುಶಾಂತ್ ಅವರ ತಂದೆ ಒತ್ತಾಯಿಸಿದರೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಸಿದ್ಧ ಎಂದು ಬಿಹಾರ ಸರ್ಕಾರ ಹೇಳಿದೆ.
ಇತ್ತೀಚೆಗೆ, ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ತಮ್ಮ ಗೆಳತಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಸುಮಾರು 15 ಕೋ.ರೂ ಹಣ ಎಗರಿಸಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಕೂಡಾ, ಕೆಲವು ಸಿದ್ದಾಂತಗಳನ್ನು ಪ್ರತಿಪಾದಿಸಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದು ಕೊಲೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆತ್ಮಹತ್ಯೆ ಮತ್ತು ಹತ್ಯೆ ಸಿದ್ದಾಂತದ ಬಗ್ಗೆ ವಿವರಣೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯ ಬಗ್ಗೆ 2 ಅಂಶಗಳನ್ನು ಅವರು ಉಲ್ಲೇಖಸಿದರೆ ಇದು ಹತ್ಯೆ ಎಂಬುವ ಅನುಮಾನ ಮೂಡಿಸುವ 24 ಅಂಶಗಳಲ್ಲಿ ಉಲ್ಲೇಖಿಸಿದ್ದಾರೆ.
ಮನೆಯಲ್ಲಿ ದೊರೆತ ಔಷಧಿಗಳು ಹಾಗೂ ಸುಶಾಂತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರದಿರುವುದು ಆತ್ಮಹತ್ಯೆಯ ಅನುಮಾನ ಮೂಡಿಸಿದರೆ, ಉಳಿದಂತೆ ಸುಮಾರು 24 ಅಂಶಗಳು ಇದು ಕೊಲೆ ಎಂಬ ಅನುಮಾನಕ್ಕೆ ಇನಷ್ಟು ಪುಷ್ಟಿ ನೀಡುತ್ತದೆ.