ವಿಜಯಪುರ, ಆ 01 (DaijiworldNews/HR): ಕೊರೊನಾ ಸೋಂಕು ತಗುಲಿದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದೆ ಎಂದು ನೊಂದ ಕುಟುಂಬವೊಂದು ಪ್ರಧಾನಿ ನರೇಂದ್ರ ಮೋದಿ ಸಹಿತ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಟ್ವೀಟ್ ಮಾಡಿ ದೂರು ಸಲ್ಲಿಸಿದ ಘಟನೆ ವಿಜಯಪುರ ಜಿಲ್ಲೆಯ ಚಾಲುಕ್ಯ ನಗರದಲ್ಲಿ ನಡೆದಿದೆ.
ಪುಣೆಯಿಂದ ಮರಳಿದ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಮನೆಯ ಮೊದಲ ಮಹಡಿಯಲ್ಲಿ ಐಸೋಲೇಟ್ ಮಾಡಿದ್ದಾರೆ. ಸೋಂಕಿತನಿಗೆ ಆರೋಗ್ಯ ಇಲಾಖೆ ಮಾತ್ರೆ, ಔಷಧ ನೀಡಿದೆ. ಸೋಂಕಿತನ ಸಂಪರ್ಕದಲ್ಲಿದ್ದ ಕುಟುಂಬದ ಇತರೆ 6 ಜನ ನೆಲಮಾಳಿಗೆ ಮನೆಯಲ್ಲಿ ವಾಸ ಇದ್ದಾರೆ.
ಸೋಂಕಿತನ ಕುಟುಂಬದ ಜೊತೆ ಯಾರೂ ಸಂಪರ್ಕ ಇರಿಸಿಕೊಳ್ಳಬಾರದು, ಸೋಂಕಿತನ ಮನೆಗೆ ಹಾಲು, ತರಕಾರಿ, ಪೇಪರ್ ಸೇರಿದಂತೆ ಯಾವುದೇ ಅಗತ್ಯ ವಸ್ತು ಪೂರೈಕೆ ಮಾಡಬಾರದು ಎಂದು ಸ್ಥಳೀಯ ಕೆಲವರು ತಕರಾರು ಮಾಡಿದ್ದಾರೆ. ಸಾಲದ್ದಕ್ಕೆ ಮನೆ ಕೆಲಸಗಾರರಿಗೂ ಕೆಲಸಕ್ಕೆ ಬರದಂತೆ ಅಡಚಣೆ ಮಾಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಇದೀಗ ಕೊರೊನಾ ಸೋಂಕಿತನ ಕುಟುಂಬಕ್ಕೆ ಸ್ಥಳೀಯರು ಸಾಮಾಜಿಕ ಬಹಿಷ್ಕಾರ ಹಾಕಿದ ಕಾರಣ ಜೀವನ ನಿರ್ವಹಣೆಯ ಸಮಸ್ಯೆಗೆ ಸಿಲುಕಿದ ಸೋಂಕಿತನ ಕುಟುಂಬ ಪ್ರಧಾನಿ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಟ್ವೀಟ್ ಮಾಡಿ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
ಈ ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ತಕ್ಷಣ ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.