ಚಿಕ್ಕಮಗಳೂರು, ಆ 01 (DaijiworldNews/PY): ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ಸಚಿವ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಡಿ.ಕೆ.ಶಿವಕುಮಾರ್ ಅವರು ಮೊದಲು ಆತ್ಮಸಾಕ್ಷಿಗೆ ತಮ್ಮ ಪ್ರಾಮಣಿಕತೆಯ ಬಗ್ಗೆ ಕೇಳಿಕೊಳ್ಳಲಿ ಎಂದರು.
ಸಿದ್ದರಾಮಯ್ಯ ಅವರು ರಿ ಡ್ಯೂವ್ ಎನ್ನುವ ನೂತನ ಪರಿಭಾಷೆಯನ್ನು ಹುಟ್ಟು ಹಾಕಿದ್ದಾರೆ. ಅಲ್ಲದೇ, 600 ಎಕರೆ ಡಿನೋಟಿಫೈ ಮಾಡಿದ್ದರು. ಈ ಡಿನೋಟಿಫೈ ವಿಚಾರವಾಗಿ ಇನ್ನೂ ಉತ್ತರ ದೊರಕಲಿಲ್ಲ. ಈ ಬಗ್ಗೆ ಉತ್ತರ ನೀಡಬೇಕಾದವರು ಸಿದ್ದರಾಮಯ್ಯ ಅವರೇ. ಈಗ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಆಧಾರವಿದ್ದರೆ ಅವರು ಪ್ರಕರಣ ದಾಖಲಿಸಲಿ. ಇಲ್ಲವೇ, ಕೋರ್ಟ್ ಅಥವಾ ಲೋಕಾಯುಕ್ತಕ್ಕೆ ಸಲ್ಲಿಸಲಿ. ಆದರೆ, ಭ್ರಷ್ಟಾಚಾರದ ಆಧಾರ ಇರದಿದ್ದಲ್ಲಿ ಪ್ರಶ್ನಿಸುವುದು ಸರಿಯಲ್ಲ. ಕೊರೊನಾದ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆ ಕೂಡಾ ಸರಿಯಲ್ಲ ಎಂದು ಹೇಳಿದರು.
ನಾಲಗೆಯಲ್ಲಿ ಎಲುಬು ಇಲ್ಲ ಎಂದು ಏನೂ ಬೇಕಾದರೂ ಮಾತನಾಡಬಹುದು ಎಂದು ಅಂದುಕೊಳ್ಳಬಾರದು. ಯಾಕೆಂದರೆ, ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ, ಕೊರೊನಾದ ವಿಚಾರದಲ್ಲಿ ಈ ರೀತಿಯಾಗಿ ಮಾತನಾಡಬಾರದು ಎಂದರು.