ಕೊಡಗು, ಆ. 01 (DaijiworldNews/MB) : ''ಕೇಂದ್ರದಲ್ಲಿರುವುದು ಮೊಂಡ, ಭಂಡ ಸರ್ಕಾರ'' ಎಂದು ಮೋದಿ ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕೊರೊನಾ ಹೆಸರಿನಲ್ಲಿ ಸರ್ಕಾರ ಜನರಿಂದ ಹಣ ಲೂಟಿ ಮಾಡುತ್ತಿದೆ. ಕಿಟ್ಗಳ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು'' ಎಂದು ಆಗ್ರಹಿಸಿದರು.
''ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದುಪ್ಪಟ್ಟು ಹಣ ಕೊಟ್ಟು ಆರೋಗ್ಯ ಉಪಕರಣಗಳನ್ನು ಖರೀದಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಸಚಿವರುಗಳು ಸರಿಯಾದ ಉತ್ತರವನ್ನು ನೀಡುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ಸುಪ್ರಿಂ ಕೋರ್ಟ್ ಚೀಮಾರಿ ಹಾಕಿದೆ. ಕೇಂದ್ರದಲ್ಲಿ ಒಂದು ಮೊಂಡ ಹಾಗೂ ಭಂಡ ಸರ್ಕಾರವಿದ್ದು ಅದು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ'' ಎಂದು ವಾಗ್ದಾಳಿ ನಡೆಸಿದರು.
''ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲ. ಬರೀ ಆಡಳಿತಕ್ಕಾಗಿ ಜನರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಮಾಡುವಲ್ಲಿ ಬಿಜೆಪಿ ತೊಡಗಿದೆ. ವೈದ್ಯಕೀಯ ಉಪಕರಣ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಬಂದರೂ ತನಿಖೆ ನಡೆಸುತ್ತಿಲ್ಲ. ಪ್ರತಿ ಗ್ರಾಮಕ್ಕೂ ತೆರಳಿ ಸರ್ಕಾರದ ಭ್ರಷ್ಟಾಚಾರದ ಮಾಹಿತಿ ನೀಡುತ್ತೇವೆ'' ಎಂದು ಹೇಳಿದರು.
''ಜನರು ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಳ್ಳಬಾರದೆಂದಾದರೆ ಭ್ರಷ್ಟಚಾರದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಸತ್ಯವೇನು ಎಂದು ರಾಜ್ಯಕ್ಕೆ ತಿಳಿಯಬೇಕು. ತನಿಖೆ ನಡೆಯದಿದ್ದರೆ ಬೀದಿಗಳಿದು ಪ್ರತಿಭಟನೆ ನಡೆಸಲಾಗುತ್ತದೆ'' ಎಂದು ಎಚ್ಚರಿಕೆ ನೀಡಿದರು.