ಮುಂಬೈ, ಆ 01 (DaijiworldNews/PY): ಕುಡಿದ ಮತ್ತಿನಲ್ಲಿ ರೈನ್ ಕೋಟ್ ಎಂದು ಪಿಪಿಇ ಕಿಟ್ ಕದ್ದ ವ್ಯಕ್ತಿಯೋರ್ವನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ವ್ಯಕ್ತಿ ತರಕಾರಿ ಮಾರುತ್ತಾ ತನ್ನ ಜೀವನ ನಿರ್ವಹಣೆ ಮಾಡುತ್ತಿದ್ದ. ಒಂದು ವಾರದ ಹಿಂದೆ ಈತ ಕಂಠಪೂರ್ತಿ ಕುಡಿದು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಚರಂಡಿಗೆ ಬಿದ್ದು ಗಾಯಗೊಂಡಿದ್ದ. ಇದನ್ನು ನೋಡಿದ ಸ್ಥಳೀಯರು ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ನಾಗ್ಪುರದ ಮಯೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಯಿಂದ ಗುಣಮುಖವಾಗಿ ಮನೆಗೆ ವಾಪಾಸ್ಸಾದ ಆತ ಕೈಯಲ್ಲಿ ಪಿಪಿಇ ಕಿಟ್ ಕಂಡುಬಂದಿದೆ. ಈ ವಿಚಾರವಾಗಿ ಆತನನ್ನು ವಿಚಾರಿಸಿದಾಗ 1 ಸಾವಿರ ಕೊಟ್ಟು ನಾನು ನನ್ನ ಸ್ನೇಹಿತರ ಕೈಯಿಂದ ಖರೀದಿಸಿದ್ದೇನೆ ಎಂದಿದ್ದಾನೆ. ಈ ವಿಚಾರ ಈತನ ಗೆಳೆಯರಿಗೆ ತಿಳಿದು ಅವರು ನಗರದ ಆರೋಗ್ಯಾಧಿಕಾರಿಗಳಿ ಮಾಹಿತಿ ನೀಡಿದ್ದು, ವ್ಯಕ್ತಿಯ ಕೈಯಿಂದ ಪಿಪಿಇ ಕಿಟ್ ವಶಪಡಿಸಿಕೊಂಡ ಅಧಿಕಾರಿಗಳು ಅದನ್ನು ಅಲ್ಲೇ ಸುಟ್ಟುಹಾಕಿದ್ದಾರೆ.
ಈ ವಿಚಾರವಾಗಿ ಅಧಿಕಾರಿಗಳು ಆತನನ್ನು ಪ್ರಶ್ನಿಸಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಂದರ್ಭ ಪಿಪಿಇ ಕಿಟ್ ಕದ್ದಿರುವುದಾಗಿ ಸತ್ಯ ಹೇಳಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅಧಿಕಾರಿಗಳು ತಕ್ಷಣವೇ ಆವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.