ಚೆನ್ನೈ, ಆ. 01 (DaijiworldNews/MB) : ''ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಮಕ್ಕಳ ಮನಸ್ಸಿನ ಮೇಲೆ ದಾಳಿಯ ಯತ್ನ ನಡೆಸಲಾಗುತ್ತಿದೆ'' ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಅನುಮೋದನೆ ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು, ''ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಜಾರಿಯಲ್ಲಿದ್ದ 10+2 ಶಿಕ್ಷಣ ಪದ್ಧತಿ ಯಶಸ್ವಿಯಾಗಿತ್ತು. ಆದರೆ ಈಗ ಅದರ ಬದಲಾಗಿ 5+3+3+4 ಶಿಕ್ಷಣ ಪದ್ಧತಿ ಮೂಲಕ ಮಕ್ಕಳ ಮನಸ್ಸಿನ ಮೇಲೆ ದಾಳಿಯ ಯತ್ನ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಕೇಂದ್ರ ಸರ್ಕಾರವು ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಹೇರುವ ಕಾರ್ಯ ಮಾಡುತ್ತಿದ್ದು ಇದರ ವಿರುದ್ದ, ಸಮಾನ ಮನಸ್ಕ ಪಕ್ಷಗಳು ಹಾಗೂ ಮುಖ್ಯಮಂತ್ರಿಗಳೆಲ್ಲರೂ ಸೇರಿ ಹೋರಾಟ ನಡೆಸುತ್ತೇವೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ಕೂಡಾ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ''ಕೇಂದ್ರ ಸರ್ಕಾರ ಈ ನೀತಿ ರೂಪಿಸುವಾಗ ರಾಜ್ಯ ಸರ್ಕಾರಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಪಾಶ್ಚಿಮಾತ್ಯ ಮಾದರಿಯ ನಕಲು. ಇದು ಏಕಪಕ್ಷೀಯ ನೀತಿ. ಸಂಸತ್ತಿನ ಅನುಮೋದನೆ ಪಡೆದುಕೊಂಡಿಲ್ಲ'' ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.