ನವದೆಹಲಿ, ಆ. 02 (DaijiworldNews/MB) : ರಾಮ ಜನ್ಮ ಭೂಮಿ ಚಳುವಳಿಯ ವಾಸ್ತುಶಿಲ್ಪಿ, ಈ ಹಿನ್ನೆಲೆ ದೇಶದಲ್ಲಿ ಮೊದಲ ಬಾರಿಗೆ ರಾಜಕೀಯ ರಥಯಾತ್ರೆಯನ್ನು ಮುನ್ನಡೆಸಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯ ರಾಮ ಮಂದಿರ ಭೂಮಿ ಪೂಜೆಗೆ ಆಹ್ವಾನಿಸಿಲ್ಲ ಎಂದು ವರದಿ ತಿಳಿಸಿದೆ. ಈ ನಡುವೆ ಇಬ್ಬರಿಗೂ ದೂರವಾಣಿ ಕರೆಯ ಮೂಲಕ ಆಹ್ವಾನ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ರಾಮ ರಥಯಾತ್ರೆ ಕೈಗೊಂಡ 92 ವರ್ಷದ ಎಲ್.ಕೆ.ಅಡ್ವಾಣಿಗೆ ಶನಿವಾರದವರೆಗೆ ಯಾವುದೇ ಭಾಗದಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ಹೇಳಲಾಗಿದೆ. ಬಿಜೆಪಿ ಹಿರಿಯ ಮುಖಂಡ ಎಲ್ಕೆ.ಅಡ್ವಾಣಿ ಸೇರಿದಂತೆ 13 ಜನರ ಮೇಲೆ ಬಾಬರಿ ಮಸೀದಿ ಕೆಡವಲು ಸಂಚು ಆರೋಪವಿದೆ.
ಈ ಮೊದಲು ಅಡ್ವಾನಿ ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಲಾಗಿದ್ದು ಆದರೆ ಶನಿವಾರದವರೆಗೂ ಹಿರಿಯರಾದ ಅಡ್ವಾನಿಯವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಹಾಗೆಯೇ ರಾಮ ಜನ್ಮಭೂಮಿ ಹೋರಾಟದ ಮತ್ತೋರ್ವ ಪ್ರಮುಖ ಮುಂದಾಳು ಜೋಶಿ ಅವರಿಗೂ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ ಎಂದು ಹೇಳಲಾಗಿದೆ.
ಇನ್ನು ಈ ಇಬ್ಬರು ಹಿರಿಯ ನಾಯಕರಿಗೂ ದೂರವಾಣಿ ಕರೆ ಮಾಡಿ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ವಿಡಿಯೋ ಕಾನ್ಫೆರನ್ಸ್ ಮೂಲಕ ವಿಚಾರಣೆ ನಡೆದಿದ್ದು ಆಗಸ್ಟ್ 30 ರೊಳಗೆ ಇದರ ತೀರ್ಪು ನೀಡುವಂತೆ ಸಿಬಿಐಗೆ ಸುಪ್ರೀಂಕ ಕೋರ್ಟ್ ಆದೇಶಿಸಿದೆ. ಈ ಪ್ರಕರಣದ ಇತರ ಆರೋಪಿಗಳಾದ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮೊದಲಾದವರ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಅಡ್ವಾಣಿಯವರ ವಿಚಾರಣೆಯ ಸಂದರ್ಭ ನಾಲ್ಕುವರೆ ಗಂಟೆಗಳ ಅವಧಿಯಲ್ಲಿ 1,000 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದ್ದು ಅಡ್ವಾಣಿ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಇತರ ಪ್ರಮುಖ ಆರೋಪಿಗಳಾದ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಶನಿವಾರ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.