ಮಂಡ್ಯ, ಆ 02 (DaijiworldNews/PY): ಮೊಬೈಲ್ ಅತಿಯಾಗಿ ಬಳಸದೇ, ಓದಿನ ಕಡೆ ಗಮನ ಹರಿಸು ಎಂದು ಬುದ್ದಿ ಮಾತು ಹೇಳಿದ ತಾಯಿಯನ್ನೇ ಚಾಕುವಿನಿಂದ ಹತ್ಯೆಗೈದು ಪರಾರಿಯಾಗಿದ್ದ ಮಗನನ್ನು ಪೊಲೀಸರು ಬಂಧಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಆರೋಪಿಯನ್ನು ಮನು ಶರ್ಮಾ (21) ಎನ್ನಲಾಗಿದೆ.
ಮನು ಶರ್ಮಾ ವಿದ್ಯಾನಗರದ ಕೆ.ಆರ್.ರಸ್ತೆಯ ಮನೆಯೊಂದರಲ್ಲಿ ವಾಸವಿದ್ದ, ಬುದ್ದಿ ಮಾತು ಹೇಳಿದ ತನ್ನ ತಾಯಿ ಶ್ರೀ ಲಕ್ಷ್ಮೀ (46) ಅವರನ್ನು ಜು.29ರಂದು ಹತ್ಯೆಗೈದು ಪರಾರಿಯಾಗಿದ್ದ.
ಹತ್ಯೆಯಾದ ಬಗ್ಗೆ ಮನೆಯ ಮಾಲೀಕ ರಮೇಶ್ ಅವರು ಜು.30ರಂದು ದೂರು ನೀಡಿದ್ದು, ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಅನ್ವಯ ಪೊಲೀಸರು ಆರೋಪಿ ಮನು ಶರ್ಮಾನನ್ನು ಬಂಧಿಸಿದ್ದಾರೆ.
ಮನು ಶರ್ಮಾ ಬಿಬಿಎಂ ವಿದ್ಯಾರ್ಥಿಯಾಗಿದ್ದು, ಅತಿಯಾಗಿ ಮೊಬೈಲ್ ಬಳಸದಂತೆ, ಕೆಟ್ಟ ಸ್ನೇಹಿತರ ಸಹವಾಸ ಮಾಡದೇ ಓದಿನ ಕಡೆ ಗಮನಕೊಡು ಎಂದು ತಾಯಿ ಶ್ರೀ ಲಕ್ಷ್ಮೀ ಬುದ್ದಿಮಾತು ಹೇಳುತ್ತಿದ್ದರು. ಹಾಗೇಯೇ ಜು.29ರಂದು ತಾಯಿ ಮಗನ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡಿದ್ದು, ಬುದ್ದಿವಾದ ಹೇಳುತ್ತಿದ್ದರು. ಈ ಕಾರಣದಿಂದ ಕೋಪಗೊಂಡ ಮನು ಶರ್ಮಾ ತನ್ನ ತಾಯಿಗೆ ಚೂರಿಯಿಂದ ಇರಿದು ಹಾಗೂ ಚಕ್ಕುಲಿ ಒರಳಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ ಎಂದು ಸ್ವತಃ ಮನು ಶರ್ಮಾ ಸತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.