ಚಿತ್ರದುರ್ಗ, ಆ 02(DaijiworldNews/HR): ಕೊರೊನಾ ಸೊಂಕು ಇಡೀ ಜಗತ್ತನ್ನೇ ಆವರಿಸಿದ್ದು, ಈ ಸೊಂಕಿನಿಂದ ಹೆಚ್ಚಾಗಿ ಸತ್ತವರೇ ವೃದ್ಧರು, ಇದೀಗ ಅಚ್ಚರಿ ಎಂಬಂತೆ ೧೧೦ ವರ್ಷದ ವೃದ್ದೆಯೊಬ್ಬರು ಕೊರೊನಾದ ಜೊತೆ ಹೋರಾಡಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜು.28 ರಂದು ಕೊರೋನಾ ಸೋಂಕಿತ 110 ವರ್ಷದ ವೃದ್ಧೆಯೊಬ್ಬರು ಚಿಕಿತ್ಸೆಗೆಂದು ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವೃದ್ಧೆ ನಾಲ್ಕೇ ದಿನಗಳಲ್ಲಿ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ವೃದ್ಧೆ ಸಿದ್ದಮ್ಮ ಅವರು, ಸೋಂಕು ತಗುಲಿ ಕೋವಿಡ್ ಆಸ್ಪತ್ರೆಗೆ ದಾಖಲಾದಾಗ ಬಹಳ ಗಾಬರಿಯಾಯಿತು. ನನ್ನನ್ನು ಮಾಸ್ಕ್ ಹಾಕಿಕೊಂಡಿದ್ದ ಜನರು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆರೋಗ್ಯ ನೋಡಿಕೊಂಡು ಪ್ರತೀ ಗಂಟೆಗೊಮ್ಮೆ ನನಗೆ ಔಷಧಿ ನೀಡುತ್ತಿದ್ದರು. ಈಗ ನಾನು ಆರೋಗ್ಯವಾಗಿದ್ದು ಮನೆಗೆ ವಾಪಾಸ್ ಬಂದಿರುವುದು ಸಂತಸವಾಗಿದೆ ಎಂದು ತಿಳಿಸಿದ್ದಾರೆ.