ನವದೆಹಲಿ, ಆ. 02 (DaijiworldNews/MB) : ಅಫ್ಘಾನಿಸ್ತಾನದಲ್ಲಿ ಚಿತ್ರಹಿಂಸೆಗೊಳಗಾದ ಸುಮಾರು 700 ಸಿಖ್ಖರನ್ನು ಕರೆತರಲು ಭಾರತ ಸಿದ್ಧತೆ ನಡೆಸಿದೆ. ಈ ಸಿಖ್ಖರನ್ನು ಹಲವಾರು ಬ್ಯಾಚ್ಗಳಲ್ಲಿ ಮರಳಿ ಕರೆತರಲಾಗುವುದು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದ ನಂತರ, ಜುಲೈ 26 ರಂದು 11 ಸಿಖ್ಖರ ಮೊದಲ ಬ್ಯಾಚ್ ಭಾರತವನ್ನು ತಲುಪಿತು. ಇವರನ್ನು ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಆತ್ಮೀಯವಾಗಿ ಸ್ವಾಗತ ಮಾಡಿದ್ದಾರೆ. ಈ ಕುಟುಂಬ ಇದೀಗ ದೆಹಲಿಯ ಗುರುದ್ವಾರದಲ್ಲಿ ವಾಸಿಸುತ್ತಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸರ್ದಾರ್ ಆರ್.ಪಿ. ಸಿಂಗ್ ಶನಿವಾರ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿ, ಮೊದಲ ಬ್ಯಾಚ್ ಭಾರತಕ್ಕೆ ಬಂದ ಬಳಿಕ ಸುಮಾರು 700 ಸಿಖ್ಖರು ಅಫ್ಘಾನಿಸ್ತಾನದಿಂದ ಬರಲು ಸಿದ್ಧರಿದ್ದಾರೆ. ಅವರೊಂದಿಗೆ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು ಅವರನ್ನು ಭಾರತಕ್ಕೆ ಮರಳಿ ಕರೆತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅವರ ಹೆಚ್ಚಿನ ಸಂಬಂಧಿಗಳು ತಿಲಕ್ ನಗರದಲ್ಲಿ ವಾಸವಾಗುತ್ತಿದ್ದು ಅದರಿಂದಾಗಿ ಅವರಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲು ಕಷ್ಟವಾಗದು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದಿಂದಾಗಿ ಅಫ್ಘಾನಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿರುವ ಸಿಖ್ ಸಹೋದರರನ್ನು ಮತ್ತೆ ಭಾರತಕ್ಕೆ ಕರೆತರಲಾಗುತ್ತಿದೆ. ಸಿಎಎ ಜಾರಿ ಮಾಡದಿದ್ದರೆ, ನೆರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಭಾರತದಲ್ಲಿ ಪೌರತ್ವ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದರು.