ನವದೆಹಲಿ, ಆ 02 (DaijiworldNews/PY): ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಬೆಳಗ್ಗಿನ ಉಪಹಾರವನ್ನು ಕೂಡಾ ನೀಡಬೇಕು ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸ್ತಾಪಿಸಿದೆ.
ಮಕ್ಕಳು ಅಪೌಷ್ಟಿಕತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಉತ್ತಮವಾಗಿ ಕಲಿಯಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ಉತ್ತಮ. ಅಲ್ಲದೇ, ಮಕ್ಕಳ ಪೋಷಣೆ ಹಾಗೂ ಆರೋಗ್ಯದ ಕಡೆಯೂ ಕೂಡ ಗಮನವಹಿಸಬೇಕು ಎಂದು ತಿಳಿಸಿದೆ.
ಬೆಳಗ್ಗಿನ ವೇಳೆ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬಹುದಾಗಿದೆ ಎಂದು ಸಂಶೋಧನೆಗಳು ವಿವರಿಸಿವೆ. ಹಾಗಾಗಿ ಬೆಳಗ್ಗಿನ ವೇಳೆ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡಿದರೆ ಉತ್ತಮ ಎಂದಿದೆ.
ಬಿಸಿಯೂಟ ನೀಡಲು ಸಾಧ್ಯವಾಗದ ಸ್ಥಳಗಳಲ್ಲಿ ಸರಳವಾದ ಉಪಹಾರ ನೀಡಬಹುದು ಆದರೆ, ಆಹಾರವೂ ಕೂಡಾ ಪೌಷ್ಟಿಕಾಂಶವನ್ನು ಹೊಂದಿರಬೇಕು. ಬೆಲ್ಲ ಅಥವಾ ಸ್ಥಳೀಯ ಹಣ್ಣುಗಳೊಂದಿಗೆ ಬೆರೆಸಿದ ಶೇಂಗಾವನ್ನು ನೀಡಬೇಕು ಎಂದು ಹೇಳಿದೆ.
ಇನ್ನು ಮಕ್ಕಳ ಆರೋಗ್ಯದತ್ತ ಗಮನಹರಿಸುವ ಸಲುವಾಗಿ ಶಾಲೆಯ ಆಡಳಿತದಲ್ಲಿ ಅತ್ಯುತ್ತಮವಾದ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಸಮುದಾಯದಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡವರು ಹಾಗೂ ಸಲಹೆಗಾರರನ್ನು ಸೇರಿಸಿಕೊಳ್ಳುವಂತೆ ಸೂಚಿಸಿದೆ.