ಲಕ್ನೊ, ಅ 02(DaijiworldNews/HR): ಕೋವಿಡ್ ಸೋಂಕಿಗೆ ತುತ್ತಾಗಿದ್ದ ಉತ್ತರ ಪ್ರದೇಶದ ಸಚಿವೆ ಕಮಲ ರಾಣಿ ಇಂದು ಲಕ್ನೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿತ್ತು.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಕಮಲಾ ರಾಣಿ ವರುಣ್ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಜುಲೈ 18 ರಂದು ಕೋವಿಡ್ ಪಾಸಿಟಿವ್ ವರದಿ ಬಂದು ಸಂಜಯ ಗಾಂಧಿ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಕೋವಿಡ್ ಮಾತ್ರವಲ್ಲದೆ ಶ್ವಾಸಕೋಶ ಸೋಂಕು ಆಗಿದ್ದರಿಂದ ಕಳೆದ ಹಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹಲವು ಪ್ರಯತ್ನಗಳ ಹೊರತಾಗಿಯೂ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.