ನವದೆಹಲಿ, ಆ 02 (DaijiworldNews/PY): ಕೊರೊನಾ ಹಿನ್ನೆಲೆ ಶಾಲಾ-ಕಾಲೇಜುಗಳು ಮುಚ್ಚಿದ್ದು, ಆನ್ಲೈನ್ ಶಿಕ್ಷಣ ಆರಂಭವಾಗಿದೆ. ಉದ್ಯೋಗಸ್ಥ ದಂಪತಿಗಳ ಅನುಪಸ್ಥಿತಿಯಲ್ಲಿ ಮಕ್ಕಳು ಮೊಬೈಲ್ಗಳಲ್ಲಿ ಸದಾ ಆನ್ಲೈನ್ನಲ್ಲಿ ಇರಬೇಕಾದ ಅನಿವಾರ್ಯ ಎದುರಾಗಿದೆ. ಇದರೊಂದಿಗೆ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆನ್ಲೈನ್ ಗೇಮ್ಸ್ ಆಡುವುದು ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಸೈಬರ್ ಕ್ರೈಂ ದುಷ್ಕರ್ಮಿಗಳಿಗೆ ಮಕ್ಕಳನ್ನು ವರ್ಚುವಲ್ ಆಗಿ ಅಪಹರಣ ಮಾಡಲು ಸುಲಭವಾಗಿದೆ.
ಉದ್ಯೋಗಸ್ಥ ಪೋಷಕರು ತಮ್ಮ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಮಾರ್ಟ್ಫೋನ್ಗಳನ್ನು ನೀಡಿರುತ್ತಾರೆ. ಆದರೆ, ಮಕ್ಕಳು ಸರಿಯಾಗಿ ಪಾಠ ಕೇಳುತ್ತಾರೋ ಇಲ್ಲವೋ ಎಂದು ಆಗಾಗ ಕರೆ ಮಾಡಿ ವಿಚಾರಿಸುತ್ತಿರುತ್ತಾರೆ.
ಈ ತಂತ್ರಜ್ಞಾನದ ನೆರವನ್ನು ಪಡೆದುಕೊಂಡು ಸೈಬರ್ ಕ್ರೈ ಕಳ್ಳರು ಮಕ್ಕಳೊಂದಿಗೆ ಇರುವ ಫೋನ್ಗಳಿಗೆ ಅಣಕು ಕರೆ ಮಾಡುತ್ತಾರೆ. ಅಲ್ಲದೇ ಫೇಸ್ಬುಕ್ ಖಾತೆಗಳ ವಿವರಗಳನ್ನು ಕೂಡಾ ಪಡೆದುಕೊಳ್ಳುತ್ತಾರೆ. ಜೊತೆಗೆ ಅವರ ಫೋಟೋಗಳನ್ನು ಕೂಡಾ ಡೌನ್ಪೋಡ್ ಮಾಡಿ ನಂತರ ತಿರುಚಿ ತಮ್ಮ ಬಳಿ ಇರುವಂತೆ ತೋರಿಸುತ್ತಾರೆ. ಅಲ್ಲದೇ, ಮಕ್ಕಳನ್ನು ಮರಳು ಮಾಡಿ ಮಕ್ಕಳ ಒಡನಾಟ ಗಳಿಸುತ್ತಾರೆ. ನಂತರ ಸೈಬರ್ ಕಳ್ಳರು ಸಾಮಾಜಿಕ ಇಂಜಿನಿಯರಿಂಗ್ ತಂತ್ರಗಳನ್ನು ಉಪಯೋಗಿಸಿ ಪೋಷಕರ ಕರೆ ಬಂದರೆ ಸ್ವೀಕರಿಸದಂತೆ ಮಾಡುತ್ತಾರೆ. ನಂತರ ಮಕ್ಕಳೊಂದಿಗಿರುವ ಫೋನ್ ಅನ್ನು ಹ್ಯಾಕ್ ಮಾಡುತ್ತಾರೆ. ಅಲ್ಲದೇ, ಅದೇ ಫೋನ್ನಿಂದ ಕರೆ ಮಾಡುತ್ತಿರುವಂತೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಮಕ್ಕಳ ಬಗ್ಗೆ ಭಯಗೊಳ್ಳುವ ಪೋಷಕರು ಬಳಿಕ ಸೈಬರ್ ಕ್ರೈ ಕಳ್ಳರು ಬೇಡಿಕೆ ಇಟ್ಟಷ್ಟು ಹಣವನ್ನು ಅನ್ಲೈನ್ ಮೂಲಕ ನೀಡುತ್ತಾರೆ.
ಇಂತಹ ವರ್ಚುವಲ್ ಅಪಹರಣದಂತ ಕೃತ್ಯಗಳು ಇಲ್ಲಿವರೆಗೆ ಭಾರತದಲ್ಲಿ ನಡೆದಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯುವ ಸಾಧ್ಯತೆಗಳು ಇವೆ. ಈ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಮಕ್ಕಳು ಇಂತಹ ಸುಳ್ಳು ಕರೆಗಳಿಗೆ ಮಾರುಹೋಗಿ, ಅಪರಿಚಿ ವ್ಯಕ್ತಿಗಳೊಂದಿಗೆ ಒಡನಾಡ ಇಟ್ಟುಕೊಳ್ಳದ ರೀತಿಯಲ್ಲಿ ನೋಡಿಕೊಳ್ಳಬೇಕು. ಈ ಬಗ್ಗೆ ನಿಮಗೆ ತಿಳಿದರೆ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿ ಎಂದು ಮುಂಬೈ ಪೊಲೀಸ್ನ ಸೈಬರ್ ಕ್ರೈಂ ಬ್ರ್ಯಾಂಚ್ ಪೊಲೀಸರು ಸಲಹೆ ನೀಡಿದ್ದಾರೆ.