ಮೈಸೂರು, ಆ. 02 (DaijiworldNews/MB) : ''ಹೂಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ, ಮತ್ಯಾಕೆ ಅದರ ಪ್ರಸ್ತಾಪ?'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಯ ವಿರುದ್ಧ ಕಿಡಿಕಾರಿದ್ದಾರೆ.
''ನಾನು ಕೂಡಾ ಯಡಿಯೂರಪ್ಪ ಅವರ ಹಳೇ ಕೇಸ್ ಬಗ್ಗೆ ಮಾತನಾಡಲೇ?'' ಎಂದು ಪ್ರಶ್ನಿಸಿದ ಅವರು, ''ನಾನು ಆ ವಾಚನ್ನು ಸರ್ಕಾರಕ್ಕೆ ವಾಪಾಸ್ ನೀಡಿದ್ದು ಎಸಿಬಿ ತನಿಖೆಯಾಗಿ ಕ್ಲೀನ್ ಚಿಟ್ ದೊರೆತಿದೆ. ಈಗ ಈ ವಿಚಾರವನ್ನು ಎತ್ತಿ ಜನರ ಹಾದಿ ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ಈಗ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಅದು ರಾಜಕೀಯ ದುರುದ್ದೇಶದಿಂದ ಹಾಕಲಾಗಿರುವ ಕೇಸ್'' ಎಂದು ಆರೋಪಿಸಿದ್ದಾರೆ.
ಕೊರೊನಾ ಭ್ರಷ್ಟಚಾರ ಆರೋಪ ಮಾಡಿದಕ್ಕೆ ನೊಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ''ನೊಟೀಸ್ ಹಿಂದಿನ ಬಂಡವಾಳ ಯಾವುದು ಎಂದು ನನಗೆ ತಿಳಿದಿಲ್ಲ. ನೊಟೀಸ್ಗೇನು ನಾನು ಹೆದರುತ್ತೇನಾ? ನಾನು ಆರೋಪ ಮಾಡಿದ್ದು ರಾಜ್ಯ ಸರ್ಕಾರದ ಮೇಲೆ, ಆದರೆ ಅವನ್ಯಾರೋ ನೊಟೀಸ್ ನೀಡಿದ್ದಾನೆ. ಸರ್ಕಾರದಿಂದ ಸಿಎಂ ಅಥವಾ ಕಾರ್ಯದರ್ಶಿ ನೀಡಬೇಕಿತ್ತು. ಯಾರೋ ನೊಟೀಸ್ ನೀಡಿದರೆ ಏನು ಪ್ರಯೋಜನ'' ಎಂದರು.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿರುವ ಅವರು, ''ಅಕ್ರಮದ ಬಗ್ಗೆ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರೆ "ಮಾಹಿತಿ ಕೊಡಿ" ಎನ್ನುತ್ತಾರೆ. ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅದು ಸುಳ್ಳು ಎನ್ನುತ್ತಾರೆ. ತನಿಖೆ ಮಾಡಿಸಿ ಎಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆ ಎಂದು ಕೇಳ್ತಾರೆ. ಜನರ ಬಳಿ ಹೋಗದೆ ನಮಗೆ ಬೇರೆ ದಾರಿ ಏನಿದೆ?'' ಎಂದು ಪ್ರಶ್ನಿಸಿದ್ದಾರೆ.
''ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು ಬಿಜೆಪಿ ನಮ್ಮ ಕೆಲಸವನ್ನು ಸುಲಭ ಮಾಡಿದೆ. ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲಾ? ಕೋರ್ಟ್ ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲಾ?'' ಎಂದಿದ್ದಾರೆ.