ಬಾಗಲಕೋಟೆ, ಆ. 02 (DaijiworldNews/MB) : ಆನ್ಲೈನ್ ಶಿಕ್ಷಣ ಪಡೆಯಲು ಅಕ್ಕ ತಂಗಿಯರಿಬ್ಬರು ಕೂಲಿ ಮಾಡಿ ಮೊಬೈಲ್ ಖರೀದಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದಲ್ಲಿ ನಡೆದಿದೆ.
ಸವಿತಾ ಹಾಗೂ ಮಹಾದೇವಿ ಕುರಿ ಎಂಬ ಇಬ್ಬರು ಸಹೋದರಿಯರು ತಮಗೆ ಆನ್ಲೈನ್ ಶಿಕ್ಷಣ ಪಡೆಯಲು ಮೊಬೈಲ್ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಓದಿನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ತಾವು ಶಿಕ್ಷಣದಿಂದ ವಂಚಿತರಾಗುತ್ತೇವೆ ಎಂದು ಹಣ ಕೂಡಿಟ್ಟು ಮೊಬೈಲ್ ಖರೀದಿಸುವ ನಿರ್ಧಾರ ಕೈಗೊಂಡರು. ತಾವು ಕೂಲಿ ಮಾಡಿ ಕೂಡಿಟ್ಟ ಹಣ ಹಾಗೂ ಸ್ಕಾಲರ್ ಶಿಪ್ ಸೇರಿಸಿ, 8, 500 ರೂ. ಸಂಗ್ರಹಿಸಿದ ಅವರು ಮೊಬೈಲ್ ಖರೀದಿಸಿದ್ದಾರೆ.
ಇನ್ನು ಈ ಇಬ್ಬರು ಸಹೋದರಿಯರು ಒಂದೇ ಮೊಬೈಲ್ ಹೊಂದಿದ್ದು 8ನೇ ತರಗತಿಯಲ್ಲಿರುವ ಮಹಾದೇವಿ, ಕೂಲಿ ಕೆಲಸ ಮುಗಿಸಿ ಬಂದು ರಾತ್ರಿ ಪಾಠ ವೀಕ್ಷಿಸಿ ಅಭ್ಯಾಸ ಮಾಡಿದರೆ ಈಕೆಯ ಅಕ್ಕ ಸವಿತಾ ಬೆಳಗ್ಗೆ ಎದ್ದು ಪಾಠ ನೋಡಿಕೊಂಡು ಕೂಲಿಗೆ ಹೋಗುತ್ತಾರೆ. ಟಿವಿಯಲ್ಲಿ ಸಮಯಕ್ಕೆ ಸರಿಯಾಗಿ ನೋಡಬೇಕು, ಆದರೆ ಮೊಬೈಲ್ನಲ್ಲಿ ಬೇಕಾದಾಗ ನೋಡಿ ಪಾಯಿಟ್ಸ್ ಮಾಡಿಕೊಳ್ಳಲು ಸುಲಭವಾಗುತ್ತದೆ ಎಂಬ ದೃಷ್ಟಿಯಿಂದ ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಮೊಬೈಲ್ ಖರೀದಿಸಿ ಅದರಲ್ಲಿ ಪಾಠ ಕೇಳುತ್ತಿದ್ದಾರೆ.
ಇನ್ನು ಈ ಬಾಲಕಿಯರಿಗೆ ಮಹಿಳಾ ಕಾಂಗ್ರೆಸ್ ಸಹಾಯ ಹಸ್ತ ಚಾಚಿದ್ದು ಈ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಸಹಾಯ ಧನ ನೀಡಿ, 6 ತಿಂಗಳವರೆಗೆ ಮೊಬೈಲ್ ರಿಚಾರ್ಜ್ ಮಾಡಿಸುವ ಭರವಸೆ ನೀಡಿದ್ದಾರೆ.