ತಿರುವನಂತಪುರ, ಆ 02 (DaijiworldNews/PY): ಕೇರಳ ಮೂಲದ ತಂದೆಯೊಬ್ಬರು ಮೃತಪಟ್ಟಿರುವ ತಮ್ಮ ಮಗನ ನೆನಪಿಗಾಗಿ ದುಬೈನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ತಾಯ್ನಾಡಿಗೆ ಕರೆತರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ.
ತಿರುವನಂತಪುರಂನ ಟಿ.ಎನ್ ಕೃಷ್ಣಕುಮಾರ್ ಅವರ ಪುತ್ರ 2019ರಲ್ಲಿ ರಸ್ತೆ ಅಪಘಾತದದಲ್ಲಿ ಸಾವನ್ನಪ್ಪಿದ್ದರು. ಕೃಷ್ಣಕುಮಾರ್ ಅವರು ತಮ್ಮ ಪುತ್ರನ ನೆನಪಿನಲ್ಲಿ ತಮ್ಮ ಸ್ವಂತ ಹಣದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿ ದುಬೈನಿಂದ ಸುಮಾರು 61 ಕೇರಳಿಗರನ್ನು 14 ಲಕ್ಷ ಖರ್ಚು ಮಾಡಿ ಭಾರತಕ್ಕೆ ಕರೆತರಲು ನೆರವಾಗಿದ್ದಾರೆ. ಇವರು ಕೂಡಾ ಸುಮಾರು 32 ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡುತ್ತಿದ್ದರು.
ಕೃಷ್ಣಕುಮಾರ್ ಅವರು ಖಾಸಗಿ ಸಂಸ್ಥೆಯಲ್ಲಿ ಮಾರಾಟ ಹಾಗೂ ಮಾರುಕಟ್ಟೆ ನಿರ್ದೇಶಕರಾಗಿ ಉದ್ಯೋಗದಲ್ಲಿದ್ದಾರೆ. ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ಮಂದಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಕಾರಣದಿಂದ ನಾನು ಅವರಿಗೆ ನೆರವಾಗಲು ಇಚ್ಛಿಸಿದ್ದೇನೆ. ನಮ್ಮ ದೇಶದ ಕೆಲವು ಮಂದಿ ದುಬೈನಲ್ಲಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರು. ಈ ನಿಟ್ಟಿನಲ್ಲಿ ಅವರಿಗೆ ನಾನು ಸಹಾಯ ಮಾಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.
2018ರ ಸಂದರ್ಭ ಕೇರಳದಲ್ಲಿ ಪ್ರವಾಹ ಬಂದ ವೇಳೆ ಕೃಷ್ಣಕುಮಾರ್ ಅವರು ಧನಸಹಾಯ ಮಾಡಿದ್ದಾರೆ. ಅಲ್ಲದೇ, ಪ್ರತಿವರ್ಷ ಇಫ್ತಾರ್ ವೇಳೆ ಕಾರ್ಮಿಕರ ಶಿಬಿರಗಳಿಗೆ ಆಹಾರ ಕಿಟ್ ಅನ್ನು ಕಳುಹಿಸುತ್ತಾರೆ. ಇವರು ಕೇರಳದ ವಿಜ್ಞಾನ ಹಾಗೂ ಕಲಾ ಕಾಲೇಜುಗಳಿಂದ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಿರುವಂತ ಯುಎಇಯಲ್ಲಿ ಸ್ಥಾಪಿತವಾದ ಆಲ್ ಕೇರಳ ಕಾಲೇಜು ಅಲುಮ್ನಿ ಫ್ರಂಟ್ನ ಸದಸ್ಯರಾಗಿದ್ದಾರೆ.