ನವದೆಹಲಿ, ಆ 03 (DaijiworldNews/PY): ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಉಪಯೊಗಿಸಲು ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಈ ವಿಚಾರದ ಬಗ್ಗೆ ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ ಡಾ.ರಾಜೀವ್ ಗರ್ಗ್ ಅವರು, ರೋಗಿಗಳು ಸ್ಮಾರ್ಟ್ಫೋನ್ ಮೂಲಕ ವಿಡಿಯೋ ಕಾನ್ಫರೆನ್ಸ್ನಲ್ಲಿ ಅವರ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ ಅವರಿಗೆ ಮಾನಸಿಕ ನೆಮ್ಮದಿ, ಮಾನಸಿಕ ಸ್ಥೈರ್ಯ ಹಾಗೂ ಬೆಂಬಲ ದೊರಕಲಿದೆ. ಸ್ಮಾರ್ಟ್ಫೋನ್ ಬಳಕೆಗೆ ಸಮಯ ನಿಗದಿ ಮಾಡುವುದು ಹಾಗೂ ರೋಗಿಗಳು ಉಪಯೋಗಿಸುವ ಉಪಕರಣಗಳ ಮೂಲಕ ಸೋಂಕು ಹರಡದಂತೆ ನಿಯಂತ್ರಿಸುವಂತ ಮಾರ್ಗಸೂಚಿಗಳನ್ನು ಆಸ್ಪತ್ರೆಗಳೇ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕೆಲವು ಆಸ್ಪತ್ರೆಗಳಲ್ಲಿ ಮೊಬೈಲ್ ಬಳಸಲು ಅವಕಾಶ ಇದೆ. ಕೆಲವು ಕಡೆಗಳಲ್ಲಿ ಮೊಬೈಲ್ ಬಳಸುವುದನ್ನು ನಿರ್ಬಂಧಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಸೂಚನೆಯನ್ನು ನೀಡಿದೆ.