ಬೆಂಗಳೂರು , ಆ 3(DaijiworldNews/HR): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೊರೊನಾ ಸೋಂಕು ತಗುಲಿರುವುದು ಧೃಡವಾದ ಬೆನ್ನಲ್ಲೇ ಅವರನ್ನು ಕಳೆದ ೨-೩ ದಿನಗಳಿಂದ ಭೇಟಿಯಾಗಿದ್ದವರೆಲ್ಲರಿಗೂ ಕೊವೀಡ್ ಟೆಸ್ಟ್ ಗೆ ಒಳಪಡಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೆ ಮುಖ್ಯಮಂತ್ರಿಗಳ ಪ್ರಯಾಣದ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಅಲ್ಲದೇ ಅವರನ್ನು ಕೆಲ ದಿನಗಳಿಂದ ಸಂಪರ್ಕಿಸಿದವರನ್ನು ಕ್ವಾರಂಟೈನ್ ಕೂಡಾ ಮಾಡಲಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಮಗಳು ಪದ್ಮಾವತಿಗೆ ಕೊರೊನಾ ಪಾಸಿಟಿವ್ ಬಂದಿದ್ದು. ಮಗ ವಿಜಯೇಂದ್ರ ವರದಿ ನೆಗೆಟಿವ್ ಬಂದಿದೆ.
ಭಾನುವಾರ ಟ್ವೀಟ್ ಮಾಡಿದ್ದ ಸಿಎಂ ಯಡಿಯೂರಪ್ಪ ತಮಗೆ ಕೊರೊನಾ ಸೋಂಕು ತಗುಲಿರುವುದನ್ನು ದೃಡಪಡಿಸಿದ್ದರು. ನನ್ನ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಮನವಿ ಮಾಡಿದ್ದರು. ಇದೀಗ ಸಿಎಂ ಯಡಿಯೂರಪ್ಪ ಹಾಗೂ ಮಗಳು ಪದ್ಮಾವತಿ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.