ನವದೆಹಲಿ, ಆ. 03 (DaijiworldNews/MB) : ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕಳೆದ ಮೇ 24ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಗೃಹ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
ಈ ಪರಿಷ್ಕೃತ ಮಾರ್ಗಸೂಚಿ ಆಗಸ್ಟ್ 8ರಿಂದ ಜಾರಿಗೆ ಬರಲಿದ್ದು ಈ ಮಾರ್ಗಸೂಚಿ ಪ್ರಕಾರವಾಗಿ ಪ್ರಯಾಣಕ್ಕೂ 96 ಗಂಟೆ ಮೊದಲು ಕೊರೊನಾ ಪರೀಕ್ಷೆ ಮಾಡಿಸಿದಾಗ ಅದು ನೆಗೆಟಿವ್ ಬಂದಿರಬೇಕು. ಹಾಗೆಯೇ ಭಾರತಕ್ಕೆ ಬಂದಿಳಿದ ಬಳಿಕ ಕೊರೊನಾ ವರದಿ ನೆಗೆಟಿವ್ ಬಂದಲ್ಲಿ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ಪಡೆಯಬಹುದಾಗಿದೆ.
ಹಾಗೆಯೇ ವ್ಯಕ್ತಿ ಪ್ರಯಾಣಕ್ಕೂ 72 ಗಂಟೆ ಮುನ್ನ newdelhiairport.in ವೆಬ್ ಸೈಟ್ನಲ್ಲಿ ಸ್ವಘೋಷಿತ ಅರ್ಜಿಯನ್ನು ತುಂಬಬೇಕು. ಈ ಅರ್ಜಿಯಲ್ಲಿ ತಾನು ಪ್ರಯಾಣ ಮಾಡಿದ ಬಳಿಕ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಆಗುತ್ತೇನೆ ಎಂದು ಬರೆಯಬೇಕು. ಈ ಹದಿನಾಲ್ಕು ದಿನಗಳ ಪೈಕಿ ಮೊದಲಿನಂತೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಏಳು ದಿನ ಹೋಂ ಕ್ವಾರಂಟೈನ್ ಆಗಿರುತ್ತದೆ. ಪ್ರಯಾಣ ಮಾಡಿ ಬಂದ ಬಳಿಕ ನೆಗೆಟಿವ್ ಆರ್ ಟಿ-ಪಿಸಿಆರ್ ತಪಾಸಣೆ ವರದಿಯನ್ನು ತೋರಿಸಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ಪಡೆಯಬಹುದಾಗಿದೆ.
ಪ್ರಯಾಣಿಕರು ಬಂದ ಬಳಿಕ ರಾಜ್ಯ ಸರ್ಕಾರಗಳು ತಮ್ಮ ಶಿಷ್ಟಚಾರದಂತೆ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ಮಾಡಬಹುದಾಗಿದ್ದು ಪ್ರಯಾಣಿಕರು ಬಂದ ಬಳಿಕ ಸ್ಕ್ರೀನಿಂಗ್ ಮಾಡುವಾಗ ಕೊರೊನಾ ಲಕ್ಷಣ ಕಂಡುಬಂದಲ್ಲಿ ಕೂಡಲೇ ಅವರನ್ನು ವೈದ್ಯಕೀಯ ಆರೈಕೆಗೆ ರವಾನಿಸಬೇಕು.
ಇನ್ನು ಆಗಸ್ಟ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧಿಸಲಾಗಿದ್ದು ಈ ಹಿಂದೆ ಜುಲೈ 31ರವರೆಗೆ ಸಾಗರೋತ್ತರ ವಿಮಾನ ಪ್ರಯಾಣವನ್ನು ನಿರ್ಬಂಧಿಸಲಾಗಿತ್ತು. ಅಂತಾರಾಷ್ಟ್ರೀಯ ಕಾರ್ಗೊ ಕಾರ್ಯಾಚರಣೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮೋದನೆ ನೀಡಿರುವ ವಿಶೇಷ ವಿಮಾನಗಳಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ.