ಭೋಪಾಲ್, ಆ 03 (DaijiworldNews/PY): ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ವ್ಯಕ್ತಿಯೋರ್ವನಿಗೆ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ನೀಡಿದ್ದು, ಲೈಂಗಿಕ ಕಿರುಕುಳ ದೂರು ನೀಡಿರುವ ಮಹಿಳೆಯಿಂದ ರಾಖಿ ಕಟ್ಟಿಸಿಕೊಳ್ಳುವಂತೆ ನ್ಯಾಯಾಧೀಶರು ಅಚ್ಚರಿಯ ಷರತ್ತು ವಿಧಿಸಿದ್ದಾರೆ.
ಈ ವ್ಯಕ್ತಿ ಜೂನ್ನಲ್ಲಿ ಉಜ್ಜೈನಿ ಜಿಲ್ಲೆಯ ಬತ್ಪಚಲನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಮನೆಯ ಪಕ್ಕದ ಮನೆಗೆ ನುಗ್ಗಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಮಾಡಲು ಪ್ರಯತ್ನಿಸಿದ್ದ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ವಿರುದ್ದ ಕೇಸು ದಾಖಲಾಗಿ ಆತ ಜೈಲು ಪಾಲಾಗಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಜಾಮೀನು ನೀಡುವ ಸಂದರ್ಭ ಕೋರ್ಟ್ ಕುತೂಹಲವಾದ ಆದೇಶ ನೀಡಿದೆ. ಲೈಂಗಿಕ ಕಿರುಕುಳದ ದೂರು ನೀಡಿರುವ ಮಹಿಳೆಯ ಮನೆಗೆ ತೆರಳಿ ಆಕೆಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳಬೇಕು. ಅಲ್ಲದೇ, ಆಕೆಯನ್ನು ಜೀವನ ಪೂರ್ತಿ ಸೋದರನಂತೆ ರಕ್ಷಿಸುವುದಾಗಿ ಮಾತು ನೀಡುವಂತೆ ನ್ಯಾಯಮೂರ್ತಿ ನ್ಯಾಯಮೂರ್ತಿ ರೋಹಿತ್ ಆರ್ಯ ತಿಳಿಸಿದ್ದಾರೆ.
ಇನ್ನು ಆಕೆ ರಾಖಿ ಕಟ್ಟಿದ ಸಂದರ್ಭ ಆಕೆಗೆ 11 ಸಾವಿರ ರೂ.ಗಳನ್ನು ನೀಡಿ ಆಶೀರ್ವಾದಿಸು. ಅಲ್ಲದೇ, ಆಕೆಯ ಮಗನಿಗೆ ಬಟ್ಟೆ ಹಾಗೂ ಸಿಹಿತಿಂಡಿ ಖರೀದಿ ಮಾಡಲು 5 ಸಾವಿರ ರೂ.ಗಳನ್ನು ನೀಡಬೇಕು ಹಾಗೂ ರಾಖಿ ಕಟ್ಟಿರುವ, ಹಣ ನೀಡಿರುವ ಫೋಟೋ, ರಷೀದಿಯನ್ನು ತೆಗೆದಿರಿಸಬೇಕು. ಇದೆಲ್ಲಾ ಮಾಹಿತಿಯನ್ನು ವಕೀಲರ ಮೂಲಕ ಹೈಕೋರ್ಟ್ಗೆ ಸಲ್ಲಿಸಬೇಕು. ಅಲ್ಲದೇ, ದೂರುದಾರ ಮಹಿಳೆ ಹಾಗೂ ಜಾಮೀನು ಪಡೆದುಕೊಂಡವರ ವಿಳಾಸವನ್ನೂ ಕೂಡಾ ನಮೂದಿಸಬೇಕು ಎಂದು ನ್ಯಾಯಾಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ವ್ಯಕ್ತಿಗೆ, 50 ಸಾವಿರ ರೂ.ಗಳ ವೈಯುಕ್ತಿಕ ಬಾಂಡ್ ಅನ್ನು ನ್ಯಾಯಾಲಯಕ್ಕೆ ನೀಡುವಂತೆ ಸೂಚಿಸಲಾಗಿದ್ದು ಹಾಗೂ 7 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ.